ಚಾಡಿ ಮಾತು ಕೇಳುವ ಶಿವರಾಂ ಅಣ್ಣರಿಂದ ಪಕ್ಷ ಸಂಘಟನೆ ಸಾಧ್ಯವೆ

KannadaprabhaNewsNetwork | Published : May 13, 2025 1:30 AM
Follow Us

ಸಾರಾಂಶ

ಪಕ್ಷವನ್ನು ಕಟ್ಟಿ ಬೆಳೆಸಬೇಕಾದ ನಾಯಕರೇ ಪಕ್ಷ ಒಡೆಯುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕಂಡಕಂಡವರ ಮಾತಿಗೆಲ್ಲಾ ಕಿವಿಗೊಡುವ ಬಿ.ಶಿವರಾಂ ಅವರಿಂದ ಪಕ್ಷ ಸಂಘಟನೆ ಸಾಧ್ಯವೇ ಎಂದು ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ನಾನು ಇತ್ತೀಚಿಗೆ ರಾಜಕೀಯಕ್ಕೆ ಬಂದವನಲ್ಲ ಸುಮಾರು ೨೫ ವರ್ಷಗಳಾಗಿದ್ದು ಉಪಾಧ್ಯಕ್ಷನಾಗಿ ಕಾಂಗ್ರೆಸ್ ನಗರ ಅಧ್ಯಕ್ಷನಾಗಿ ಕೆಲಸ ಮಾಡಿರುವ ಅನುಭವವಿದ್ದು ಇತ್ತೀಚೆಗೆ ಪಕ್ಷದಲ್ಲಿ ಬಂದ ಸೇರ್ಪಡೆಯಾದವರಿಗೆ ಮಣೆ ಹಾಕುತ್ತಿರುವ ಬಿ ಶಿವರಾಂ ಅವರು ತಮ್ಮ ಪಕ್ಷವನ್ನೇ ಒಡೆದು ಆಳುವ ನೀತಿಗೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಕ್ಷವನ್ನು ಕಟ್ಟಿ ಬೆಳೆಸಬೇಕಾದ ನಾಯಕರೇ ಪಕ್ಷ ಒಡೆಯುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕಂಡಕಂಡವರ ಮಾತಿಗೆಲ್ಲಾ ಕಿವಿಗೊಡುವ ಬಿ.ಶಿವರಾಂ ಅವರಿಂದ ಪಕ್ಷ ಸಂಘಟನೆ ಸಾಧ್ಯವೇ ಎಂದು ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಸ್ವಪಕ್ಷೀಯ ಸದಸ್ಯರೇ ಮಂಡಿಸಿದ್ದ ಪುರಸಭೆ ಅವಿಶ್ವಾಸ ನಿರ್ಣಯದಲ್ಲಿ ಗೊಂದಲ ಗಲಾಟೆ ನಡುವೆ ಆರ್‌ ಅಶೋಕ್ ಎರಡನೆ ಬಾರಿಗೆ ತಮ್ಮ ಪುರಸಭೆ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿದ್ದು ತಮ್ಮ ಕಚೇರಿಗೆ ಸೋಮವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಗಣ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್, ನಾನು ಪುರಸಭೆ ಅಧಿಕಾರ ವಹಿಸಿ ಅಧ್ಯಕ್ಷನಾದ ದಿನದಿಂದಲೂ ನಮ್ಮ ಪಕ್ಷದವರೇ ನನ್ನನ್ನು ತುಳಿಯಲು ನೋಡುತ್ತಿದ್ದರು. ನಾನು ಆಗಿನಿಂದಲೇ ಇದನ್ನು ಹಿಮ್ಮೆಟ್ಟಿಸಿ ಮುನ್ನುಗ್ಗಿ ಯಾವುದಕ್ಕೂ ನಾನು ಬಗ್ಗಿರಲಿಲ್ಲ. ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಏಳೆಂಟು ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಅವರಿಗೆ ಅವರು ಅವಿಶ್ವಾಸ ನಿರ್ಣಯ ತರಬೇಕು ಎಂದು ದಿನ ಗೊತ್ತು ಮಾಡಿದ್ದು ಅದಕ್ಕೆ ನಾವು ಕೂಡ ನಮಗೆ ಎಷ್ಟು ಜನ ಸದಸ್ಯರು ಬೇಕು ಎಂದು ಎಂಬ ಬಗ್ಗೆ ಅರಿವಿತ್ತು. ಅವಿಶ್ವಾಸ ಹಿಂದಿನ ದಿನ ನಮ್ಮ ಸದಸ್ಯರ ಒಡಗೂಡಿ ಪ್ರವಾಸಕ್ಕೆಂದು ಹೋದಾಗ ತೌಫಿಕ್, ಶಾಂತಕುಮಾರ್ ಹಾಗೂ ನಿಶಾಂತ್ ಅವರ ತಂಡದ ಸದಸ್ಯರು ಹಾಗೂ ಕುಟುಂಬದ ಮೇಲೆ ಏಕಾಏಕಿ ಸುಮಾರು ೫೨ ಜನರು ಹಾಗು ೧೩ ಕಾರುಗಳಲ್ಲಿ ಬಂದು ನಮ್ಮ ಮೇಲೆ ದಾಳಿ ಮಾಡಿ ಪ್ರಾಣಕ್ಕೂ ಸಂಚಕಾರ ತಂದಿದ್ದರು. ಸೋಮವಾರ ಪೇಟೆಯಿಂದ ನಾವು ನಮ್ಮ ಸದಸ್ಯರು ಹೇಗೊ ತಪ್ಪಿಸಿಕೊಂಡು ಬಂದಿದ್ದೆವು. ನಾವು ಯಸಳೂರು ಪೊಲೀಸ್ ಠಾಣೆಗೆ ಹೋಗಿ ಸೆಕ್ಯೂರಟಿ ಪಡೆದು ಹಾಸನ ಎಸ್‌ಪಿ ಅವರ ಕರೆ ಮಾಡಿ ಅವರ ಸೂಚನೆ ಮೇರೆಗೆ ಹಾಸನಕ್ಕೆ ತೆರಳಿದ್ದೆವು ಎಂದು ವಿವರಿಸಿದರು.

ಒಡೆದು ಆಳುವ ನೀತಿ:

ನಂತರ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಅವರು ಅವಿಶ್ವಾಸ ತರಲು ವಿಫಲರಾದ ಹಿನ್ನೆಲೆಯಲ್ಲಿ ಶಾಸಕ ಹಾಗೂ ಎಂಪಿಯವರ ನಡುವೆಯೇ ಮೇಜು, ಕುರ್ಚಿ ಹಾಗು ಗ್ಲಾಸ್ ಅನ್ನು ಪುಡಿಪುಡಿ ಮಾಡಿ ಸಭೆಗೆ ಅವಮಾನ ಮಾಡಿದ್ದಲ್ಲದೆ ನಮ್ಮ ಮುಖ್ಯಾಧಿಕಾರಿಯವರ ಕೊರಳು ಪಟ್ಟಿಯನ್ನು ಹಿಡಿದು ಎಳೆದಾಡಿದ್ದಾರೆ. ನಾವು ಏನೂ ಮಾತಾಡದೆ ಸಂಜೆಯವರಿಗೂ ಅಲ್ಲಿಯೇ ಶಾಸಕರ ಜೊತೆಗೂಡಿ ಕುಳಿತಿದ್ದೆವು. ನಂತರ ಆದ ಘಟನೆ ಮಾಧ್ಯಮದವರಿಗೂ ಹಾಗು ಜನರಿಗೂ ಸತ್ಯ ತಿಳಿದಿದೆ ಎಂದರು. ಇದಕ್ಕೆಲ್ಲಾ ಕಾರಣ ಹಿರಿಯ ಮಾಜಿ ಸಚಿವ ಹಿತ್ತಾಳೆ ಕಿವಿ. ಬಿ ಶಿವರಾಂ ಅವರ ಕುಮ್ಮಕ್ಕೇ ಕಾರಣವಾಗಿದೆ. ಅವರಿಗೆ ನಮ್ಮ ತಂಡ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದು ಈ ರೀತಿ ಸಭೆ ನಿಲ್ಲಿಸಿ ಕಿತಾಪತಿ ಮಾಡಿರುವುದು ಅವರ ಘನತೆಗೆ ತಕ್ಕದಲ್ಲ. ನಂತರದ ಬೆಳವಣಿಗೆ ನಿಮಗೆ ತಿಳಿದೂ ಅವಿಶ್ವಾಸ ಗೊತ್ತುವಳಿಯಲ್ಲಿ ನಾವು ಗೆದ್ದಿದ್ದು ಮತ್ತೆ ಪುರಸಭೆ ಅಧ್ಯಕ್ಷನಾಗಿದ್ದೇನೆ. ಆದರೆ ಇಲ್ಲಿ ವಿಷಾದವೇನೆಂದರೆ ನಾನು ಇತ್ತೀಚಿಗೆ ರಾಜಕೀಯಕ್ಕೆ ಬಂದವನಲ್ಲ ಸುಮಾರು ೨೫ ವರ್ಷಗಳಾಗಿದ್ದು ಉಪಾಧ್ಯಕ್ಷನಾಗಿ ಕಾಂಗ್ರೆಸ್ ನಗರ ಅಧ್ಯಕ್ಷನಾಗಿ ಕೆಲಸ ಮಾಡಿರುವ ಅನುಭವವಿದ್ದು ಇತ್ತೀಚೆಗೆ ಪಕ್ಷದಲ್ಲಿ ಬಂದ ಸೇರ್ಪಡೆಯಾದವರಿಗೆ ಮಣೆ ಹಾಕುತ್ತಿರುವ ಬಿ ಶಿವರಾಂ ಅವರು ತಮ್ಮ ಪಕ್ಷವನ್ನೇ ಒಡೆದು ಆಳುವ ನೀತಿಗೆ ಅನುಸರಿಸುತ್ತಿದ್ದಾರೆ ಎಂದು ದೂರಿದರು. ಗಂಡಸಿ, ಹಾಸನ, ಅರಸೀಕೆರೆ ಹಾಗೂ ಇತರೆ ಕಡೆ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿ ಅಲ್ಲೂ ಬೇರೂರದೆ ಸರಿಯಾಗಿ ಮರ್ಯಾದೆ ಕಳೆದುಕೊಂಡು ಈಗ ಬೇಲೂರಿಗೂ ಕೂಡ ಅಲ್ಲಿಂದ ಇಲ್ಲಿಗೆ ಬಂದು ಇಲ್ಲೂ ಕೂಡ ಪಕ್ಷ ಒಡೆಯುವ ನೀತಿ ಮಾಡುತ್ತಿರುವುದು ಖಂಡನೀಯ. ಶಿವರಾಂ ಒಳ್ಳೆಯವರಾದರು ಅವರಿಗೆ ಕಿವಿ ಹಿಂಡುವ ಕೆಲಸ ನಮಗೆ ಆಗದವರೇ ಮಾಡುತ್ತಿದ್ದಾರೆ. ಪುರಸಭೆಯಲ್ಲಿ ನನ್ನ ಅಧ್ಯಕ್ಷ ಸ್ಥಾನ ತೆರವು ಮಾಡಲು ಕಾಂಗ್ರೆಸ್ ಪಕ್ಷದ ಎಮ್ ಆರ್ ವೆಂಕಟೇಶ್, ನಿಶಾಂತ್, ಶಾಂತಕುಮಾರ್ ಹಾಗೂ ತೌಫಿಕ್ ಇತರರು ಎನೇ ಮಾಡಿದರೂ ಅದು ಸಫಲವಾಗಿಲ್ಲ ಎಂದರು.

ತೇಜೋವಧೆ ಮಾಡುತ್ತಿದ್ದಾರೆ:

ಅಭಿವೃದ್ಧಿ ಕೆಲಸಕ್ಕೆ ನಾನು ಶಾಸಕರ ಜೊತೆ ಕೈಜೋಡಿಸಿದ್ದು ಶಿವರಾಂ ಅವರಿಗೆ ಸಹಿಸಲಾಗಿಲ್ಲ. ಚುನಾವಣೆ ಬಂದಾಗ ಶಾಸಕರ ಪಕ್ಷವೇ ಬೇರೆ, ನಮ್ಮ ಪಕ್ಷವೆ ಬೇರೆಯಾಗಿ ಕೆಲಸ ಮಾಡುತ್ತೇವೆ. ಅಭಿವೃದ್ಧಿಗಾಗಿ ಈಗ ಅವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಸಹಿಸದ ಶಿವರಾಂ ಶಾಸಕರ ಪರವಾಗಿದ್ದೇನೆ ಎಂದು ನನ್ನ ಅಭಿವೃದ್ಧಿ ಕೆಲಸ ಸಹಿಸದೆ ಸುಖಾಸುಮ್ಮನೆ ಆರೋಪ ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದರು.ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡುವ ಶಾಂತಕುಮಾರ್ ಸೈಯದ್ ತೌಫಿಕ್ ಅವರಿಗೆ ಹೇಳುವುದೇನೆಂದರೆ ನಿಮ್ಮ ಅವಧಿಗಳಲ್ಲಿ ಅಧಿಕಾರದಲ್ಲಿ ಎಷ್ಟು ಭ್ರಷ್ಟಾಚಾರ ಆಗಿದೆ, ಅಂಗಡಿ ಮಳಿಗೆ ವಿಚಾರದಲ್ಲಿ ಎಷ್ಟು ಹಣ ಹೊಡೆದಿದ್ದೀರ ಎಂಬುದಕ್ಕೆ ಸಾಕ್ಷಿ ದಾಖಲೆ ನನ್ನ ಹತ್ತಿರ ಇದೆ. ನನ್ನ ಮೇಲೆ ಏನೇ ಆರೋಪ ಬಂದರು ಕೂಡ ನಾನು ಸಮರ್ಥನಾಗಿ ಎದುರಿಸಲು ಸಿದ್ಧನಾಗಿದ್ದು, ಮುಂದಿನ ಪುರಸಭೆ ಸಭೆಗಳನ್ನು ಪೊಲೀಸ್ ಜೊತೆಯಲ್ಲಿ ಸೂಕ್ತ ಭದ್ರತೆ ಒದಗಿಸಿಕೊಂಡು ನಡೆಸಲಾಗುವುದು. ಈ ಹಿಂದೆ ರುದ್ರೇಶಗೌಡರ ಕಾಲದಲ್ಲಿ ಪಕ್ಷ ಸಂಘಟನೆ ಹೇಗಿತ್ತು, ಈಗ ಬಿ ಶಿವರಾಂ ಅವರು ಬಂದು ೮ ವರ್ಷವಾಗಿದ್ದು ಈಗ ಹೇಗೆ ಹರಿದು ಹಂಚಿಹೋಗಿದೆ ಎಂದು ಜನ ಗಮನಿಸುತ್ತಿದ್ದಾರೆ. ರಾಜಕೀಯದಲ್ಲಿ ಪ್ರವೀಣರೆಂದು ಗುರುತಿಸಿಕೊಂಡಿರುವ ಹಿತ್ತಾಳೆ ಕಿವಿ ಶಿವರಾಂ ಅವರು ಈ ಹಿಂದೆ ರುದ್ರೇಶ್ ಗೌಡರ ಪ್ಯಾಮಿಲಿಯನ್ನು ಟಾರ್ಗೆಟ್ ಮಾಡಿ ಕುತಂತ್ರ ಮಾಡಿ ಸೋಲಿಸಿದ್ದು, ಇವರು ಚುನಾವಣೆಯಲ್ಲಿ ನಿಂತಾಗ ಇವರನ್ನು ಹೇಗೆ ಸೋಲಿಸಿದರು ಅಂತ ಜನತೆಗೆ ಗೊತ್ತಿದೆ. ಈಗ ಮತ್ತಷ್ಟು ಪಕ್ಷವನ್ನು ಹದಗೆಡಿಸುತ್ತಿರುವುದು ನೋಡಿದರೆ ಪಕ್ಷವನ್ನು ವಿನಾಶದ ಅಂಚಿಗೆ ದೂಡುವುದರಲ್ಲಿ ಸಂಶಯವಿಲ್ಲ ಎಂದು ನುಡಿದರು.

ಅಧಿಕಾರ ಇರುತ್ತೆ ಹೋಗುತ್ತೆ ಅದಕ್ಕೆ ನಾನು ತಲೆಕೆಡಿಸಿಕೊಳ್ಳೊಲ್ಲ. ಆದರೆ ಪಕ್ಷದಲ್ಲಿ ಇದ್ದರೂ ನನ್ನನ್ನು ಹೊರಗಿಟ್ಟು ಸಭೆ ನಡೆಸಿದ್ದಾರೆ. ಸೌಜನ್ಯಕ್ಕಾಗಿಯೂ ಕರೆದಿಲ್ಲ. ನಾನು ಅವಿಶ್ವಾಸ ನಿರ್ಣಯದಲ್ಲಿ ಗೆದ್ದಿದ್ದು ಮುಂದಿನ ಒಂದು ವರ್ಷಗಳ ಕಾಲ ಅವಧಿ ಇದ್ದರೂ ನಾನು ಸಂಪೂರ್ಣವಾಗಿ ಅಧಿಕಾರದಲ್ಲಿರದೆ ಇತರ ಮೂರು ಸದಸ್ಯರಿಗೆ ಅಧ್ಯಕ್ಷರನ್ನಾಗಿ ಮಾಡಲು ಅನುವು ಮಾಡಿಕೊಡಲಾಗುವುದು. ಆದರೆ ಈ ಸಂದರ್ಭದಲ್ಲಿ ಶಿವರಾಂ ಅವರನ್ನು ದೂರ ಇಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಕ್ರಂ, ಜಗದೀಶ್ ,ಶೈಲೇಶ್, ,ಪ್ರಭಾಕರ್, ಕರವೇ ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು.