ಎಸ್.ಜಿ. ತೆಗ್ಗಿನಮನಿ
ಕಳೆದ ನಾಲ್ಕೈದು ವರ್ಷಗಳಿಂದ ಈ ಭಾಗದಲ್ಲಿ ಸರ್ಕಾರ ಜಲಾಶಯದಿಂದ ನೇರವಾಗಿ ಗ್ರಾಮೀಣ ಭಾಗದ ನಲ್ಲಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 24/7ನೀರು ಪೊರೈಕೆ ಪ್ರಾರಂಭ ಮಾಡಿದ ನಂತರ ಪಟ್ಟಣ ಹಾಗೂ ಗ್ರಾಮೀಣ ಭಾಗದ ಕೆರೆಗಳನ್ನು ಬಳಕೆ ಮಾಡದೇ ಪಾಳು ಬಿದ್ದಿವೆ. ಸ್ವಚ್ಛಗೊಳಿಸದೇ ಹೇಗೆ ಕೆರೆಗಳನ್ನು ತುಂಬಿಸುತ್ತಾರೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಪಟ್ಟಣ ಮತ್ತು ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿ ನವೀಲುತೀರ್ಥ (ರೇಣುಕಾ ಸಾಗರದಿಂದ) ಪೈಪುಗಳ ಮೂಲಕ ನೀರು ತೆಗೆದುಕೊಂಡು ಬಂದು ಪ್ರತಿದಿನ ನಲ್ಲಿಗಳಿಗೆ ನೀರು ಪೂರೈಕೆ ಮಾಡುವುದು ಕಷ್ಟವಾಗಿದೆ. ಒಂದು ಕಡೆ ಈ ಭಾಗದಲ್ಲಿ ಈಗ ಮಳೆ ಪ್ರಾರಂಭವಾಗಿದ್ದರಿಂದ ಮಳೆ, ಗಾಳಿಗೆ ವಿದ್ಯುತ್ ವ್ಯತ್ಯಯದಿಂದ ಪ್ರತಿ ದಿನ ನೀರು ಎತ್ತುವ ಪಂಪುಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಪಟ್ಟಣ ಹಾಗೂ ಗ್ರಾಮೀಣ ಭಾಗದ ಕುಡಿಯುವ ನೀರಿನ ಪೈಪ್‌ಗಳಿಗೆ ನೀರು ಪೂರೈಕೆ ಆಗದ್ದರಿಂದ ಇಂದು ಗ್ರಾಮೀಣ ಜನರು ಕುಡಿಯುವ ಹನಿ ನೀರು ಪಡೆದುಕೊಳ್ಳಲು ಹೆಣಗಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದೆ.ಜಲಾಶಯದಿಂದ ಅಧ೯ ಟಿಎಂಸಿ ನೀರು ಪೂರೈಕೆ
ನರಗುಂದ ತಾಲೂಕಿನ 23 ಗ್ರಾಮಗಳ ಕೆರೆಗಳು ಮತ್ತು ರೋಣ ತಾಲೂಕಿನ ಹಲವಾರು ಗ್ರಾಮಗಳ ಕೆರೆ ತುಂಬಿಕೊಳ್ಳಲು ಮೇ-13ರಿಂದ22ರ ವರಗೆ ಜಲಾಶಯದಿಂದ 0.56 ಟಿಎಂಸಿ ನೀರು ಪೂರೈಕೆ ಮಾಡಲಿದೆ.ಸದ್ಯ ಕಾಲುವೆಗಳಗೆ ಪೂರೈಕೆ ಆಗುವ ನೀರನ್ನು ರೈತರು ಕೃಷಿಗೆ ಬಳಸುವಂತಿಲ್ಲ. ಪಂಪ್‌ಸೆಟ್‌ಗಳ ಮೂಲಕ ಏನಾದರೂ ಈ ನೀರು ಬಳಕೆ ಮಾಡಿಕೊಂಡರೆ ಅಂಥವರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಪ್ರಕರಣ ದಾಖಲಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳು ನರಗುಂದ ಮತ್ತು ರೋಣ ತಹಸೀಲ್ದಾರ್‌ಗೆ ನೀಡಿದ್ದಾರೆ. 134 ಗ್ರಾಮಗಳು ಕುಡಿಯುವ ನೀರಿಗೆ ಈ ಜಲಾಶಯವನ್ನೇ ಅವಲಂಬಿಸಿವೆ. ಸದ್ಯ ನರಗುಂದ ಮತ್ತು ರೋಣ ತಾಲೂಕಿನ ಹಲವು ಗ್ರಾಮಗಳಲ್ಲಿ ಸ್ವಲ್ಪ ಕುಡಿಯುವ ನೀರಿನ ಕೊರತೆಯಾಗಿರುವ ಗ್ರಾಮಗಳ ಕೆರೆ ತುಂಬಿಕೊಳ್ಳಲು ಮೊದಲು ಆದ್ಯತೆ ನೀಡಲಾಗುವುದೆಂದು ತಾಪಂ ಅಧಿಕಾರಿ ಎಸ್.ಕೆ. ಇನಾಮದಾದ ಹೇಳಿದರು.ಮೇ 13ರಿಂದ 22ರ ವರಗೆ ಪ್ರತಿ ದಿವಸ ಕಾಲುವೆಗಳಲ್ಲಿ 300 ಕ್ಯೂಸೆಕ್ ನೀರು ಪೂರೈಕೆ ಆಗುವುದು, ಕುಡಿಯುವ ನೀರಿನ ಅವಶ್ಯಕತೆ ಇರುವ ಗ್ರಾಮಸ್ಥರು ಕಾಲುವೆ ಮೂಲಕ ಕೆರೆ ತುಂಬಿಸಿಕೊಳ್ಳಲು ಅನುಕೂಲ ಮಾಡಲಾಗಿದೆ ಎಂದು ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕುರಿ ಹೇಳಿದರು.
ಕಾಲುವೆ ಮೂಲಕ ಕೆರೆ ತುಂಬಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಂದ ನಮಗೆ ಮಾಹಿತಿ ಮುಟ್ಟಿದ ತಕ್ಷಣವೇ ನಮ್ಮ ತಾಲೂಕಿನ ತಾಪಂ ಮತ್ತು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ರವಾನೆ ಮಾಡಿದ್ದೇನೆ. ಹಾಗಾಗಿ ಎಲ್ಲಾ ಗ್ರಾಪಂ ಅಧಿಕಾರಿಗಳಿಗೆ ಕೆರೆ ತುಂಬಿಕೊಳ್ಳಲು ಸೂಚನೆ ನೀಡಲಾಗಿದೆ ನರಗುಂದ ತಹಸೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.