- ಗೊಲ್ಲರಹಳ್ಳಿಯಲ್ಲಿ ಶ್ರೀರಾಮ ಮಂದಿರ ದೇವಸ್ಥಾನ ಗೃಹಪ್ರವೇಶ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಗವಂತನ ಸೇವೆಯಲ್ಲಿ ಉತ್ಸಾಹ ಮತ್ತು ಭಕ್ತಿ ಇರಬೇಕು ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀರಾಮ ಮಂದಿರ ದೇವಸ್ಥಾನ ಗೃಹಪ್ರವೇಶ, ಕಳಸಾರೋಹಣ ಮತ್ತು ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯರು ಭಾವನಾತ್ಮಕವಾಗಿ ಪರಿಶುದ್ಧವಾಗಿ ಇರಬೇಕು. ಭಗವಂತನ ಸೇವೆಯಲ್ಲಿ ಸದಾ ತೊಡಗಿದ್ದಾಗ ದೇವರ ಕೃಪೆಯಿಂದ ಮನುಕುಲದ ಏಳಿಗೆ ಆಯಾಗುತ್ತದೆ. ಧರ್ಮಸಭೆಗೆ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಿ. ಹೆಣ್ಣುಮಕ್ಕಳಿಗೆ ಕೊಟ್ಟಂತಹ ಗಮನ, ಎಚ್ಚರಿಕೆ ಗಂಡುಮಕ್ಕಳಿಗೆ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಬಾಲಕಿಯರ ಫಲಿತಾಂಶ ಮೇಲುಗೈ ಸಾಧಿಸುತ್ತಿದೆ. ಹೆಣ್ಣಾಗಲಿ, ಗಂಡಾಗಲಿ ಫಲಿತಾಂಶ ಸಮಾನಾಗಿ ಬರಬೇಕು ಎಂದರು.
ಅನೇಕ ಮಹಿಳೆಯರು ಸರ್ಕಾರ ನೀಡುವ ಗೃಹಲಕ್ಷ್ಮಿ ಯೋಜನೆಯ ₹2 ಸಾವಿರವನ್ನು ದೇವಸ್ಥಾನ ನಿರ್ಮಾಣಕ್ಕೆ ಕೊಡುತ್ತಿದ್ದಾರೆ. ಭಕ್ತಿ, ಧರ್ಮ ಮಹಿಳೆಯರಲ್ಲಿದೆ. ಕುಟುಂಬದ, ಯಜಮಾನಿಕೆ ತಾಯಂದಿರು ನಡೆಸುತ್ತಿದ್ದರೆ ಆ ಕುಟುಂಬ ಸಾಲದಲ್ಲಿ ಇರುವುದಿಲ್ಲ. ಪುರುಷ ಯಜಮಾನಿಕೆ ಮಾಡಿದರೆ ಸಾಲ ಇದ್ದೇ ಇರುತ್ತದೆ ಎಂದು ಹೇಳಿದರು.
ಗ್ರಾಮದ ಹಿರಿಯ ಮುಖಂಡ ಹಾಲಪ್ಪಗೌಡ, ವೈದ್ಯ ಅಭಿಷೇಕ್, ಪಿ.ಸಿ. ಗಿರೀಶ್ ಮಾತನಾಡಿದರು. ದೇವಸ್ಥಾನಕ್ಕೆ ಸ್ಥಳ ದಾನ ಮಾಡಿದ ವಿಜಯಪ್ಪ ಇದ್ದರು. ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಪ್ರಾರ್ಥಿಸಿದರು. ಗಣೇಶ್ ಸ್ವಾಗತಿಸಿದರು. ಕೆ.ಟಿ.ಗೋವಿಂದಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.
- - -
ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.