ಕಾರವಾರ: ಮಿಸೈಲ್ ದಾಳಿ, ಬಾಂಬ್ ಸ್ಫೋಟ, ಹೊತ್ತಿ ಉರಿದ ಕಟ್ಟಡ, ಅಣು ವಿಕಿರಣದಿಂದ ರಕ್ಷಣೆ ಹೀಗೆ ತುರ್ತು ಸಂದರ್ಭದಲ್ಲಿ ಜನತೆಯ ರಕ್ಷಣಾ ಕಾರ್ಯಾಚರಣೆಯ ಮಾಕ್ ಡ್ರಿಲ್ ಯಶಸ್ವಿಯಾಗಿ ನಡೆಯಿತು. ಉತ್ತರ ಕನ್ನಡ ಯುದ್ಧದ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಯಿತು.
ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್‌ನಲ್ಲಿ ಕಟ್ಟಡ ಕುಸಿದು ಬಿದ್ದಾಗ ಸ್ಥಳದಲ್ಲಿದ್ದ ಜನರನ್ನು ರಕ್ಷಣೆ ಮಾಡುವ ಬಗ್ಗೆ, ಕೈಗಾ ಅಣು ವಿದ್ಯುತ್ ಕೇಂದ್ರದ ಒಳಗೆ ಬೆಂಕಿ ಅವಘಡದಿಂದ ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆ, ಅಮದಳ್ಳಿಯ ನೇವಲ್ ಬೇಸ್ ಬಳಿ ಸಿವಿಲಿಯನ್ ಕಾಲೋನಿಯಲ್ಲಿ ಅಗ್ನಿ ಅವಘಡದಿಂದ ರಕ್ಷಣಾ ಕಾರ್ಯಾಚರಣೆ, ಕಾರವಾರದ ರವೀಂದ್ರನಾಥ ಠಾಗೋರ ಬೀಚ್‌ನಲ್ಲಿ ಬಾಂಬ್ ದಾಳಿಯಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆ ಮತ್ತು ಅಣು ವಿಕಿರಣದಿಂದ ಸಾರ್ವಜನಿಕರ ರಕ್ಷಣೆ ಕುರಿತಂತೆ ಹರ್ಟುಗಾ ಗ್ರಾಮದಿಂದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ರೈಲ್ವೆ ನಿಲ್ದಾಣದಲ್ಲಿನ ಬಾಂಬ್ ದಾಳಿಯಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆಗಳನ್ನು ಅತ್ಯಂತ ಯಶಸ್ವಿಯಾಗಿ ಕೈಗೊಳ್ಳಲಾಯಿತು.
ಕಾರ್ಯಾಚರಣೆಯಲ್ಲಿ ನೌಕಾಪಡೆ, ಕೋಸ್ಟ್ ಗಾರ್ಡ್, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಎನ್.ಡಿ.ಆರ್.ಎಫ್, ಪೊಲೀಸ್, ಕರಾವಳಿ ಪೊಲೀಸ್, ರೈಲ್ವೆ ರಕ್ಷಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಗೃಹ ರಕ್ಷಕ ದಳ, ಕಂದಾಯ, ಆರೋಗ್ಯ, ಮೀನುಗಾರಿಕೆ, ನಗರಸಭೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಎನ್.ಎಸ್.ಎಸ್., ಎನ್.ಸಿ.ಸಿ. ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.ಸಂಜೆ 7.30 ರಿಂದ 8 ಗಂಟೆಯ ಅವಧಿಯಲ್ಲಿ ಬ್ಲ್ಯಾಕ್ ಔಟ್ ಕಾರ್ಯಾಚರಣೆ ನಡೆಸಲಾಗಿದ್ದು, ಈ ಅವಧಿಯಲ್ಲಿ ಸೈರನ್ ಮೊಳಗಿದ ತಕ್ಷಣ ಕಾರವಾರ ನಗರಪ್ರದೇಶದಲ್ಲಿ ಸಾರ್ವಜನಿಕರು ತಮ್ಮ ಮನೆಗಳ ಕಿಟಕಿ, ಬಾಗಿಲು ಮುಚ್ಚಿ, ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಕತ್ತಲು ಮಾಡಿದರು. ವಾಹನ ಸವಾರರು ತಾವು ಚಲಾಯಿಸುತ್ತಿದ್ದ ವಾಹನಗಳನ್ನು ಬಂದ್ ಮಾಡಿ ಹೆಡ್ ಲೈಟ್ ಆರಿಸಿ ರಸ್ತೆಯ ಪಕ್ಕದಲ್ಲಿ ಸುರಕ್ಷಿತವಾಗಿ ನಿಂತು ಬ್ಲ್ಯಾಕ್ ಔಟ್ ಕಾರ್ಯಾಚರಣೆಗೆ ಸಹಕಾರ ನೀಡಿದರು. ಕೈಗಾ ಟೌನ್‌ಶಿಪ್ ನಲ್ಲಿ ಕೂಡ ಬ್ಲ್ಯಾಕ್ ಔಟ್ ಕಾರ್ಯಾಚರಣೆ ಕೈಗೊಳ್ಳಲಾಯಿತು. ಬ್ಲಾಕ್ ಔಟ್ ಕಾರ್ಯಾಚರಣೆಗಾಗಿ 13 ಸೈರನ್‌ಗಳನ್ನು ಅಳವಡಿಸಲಾಗಿತ್ತು.
ಕೈಗಾ ಅಣು ವಿದ್ಯುತ್ ಕೇಂದ್ರದ ಒಳಗೆ ಬೆಂಕಿ ಅವಘಡವಾಗಿರುವ ಬಗ್ಗೆ ಕಂಟ್ರೋಲ್ ರೂಮ್‌ಗೆ ಸಂಜೆ 4.15 ಗಂಟೆಗೆ ಕರೆ ಮೂಲಕ ಮಾಹಿತಿ ತಿಳಿಯಿತು. ತಕ್ಷಣ ಅಗ್ನಿ ಶಾಮಕ ದಳದವರನ್ನು, ಪೊಲೀಸ್, ಕಂದಾಯ ಇಲಾಖೆ ಹಾಗೂ ವೈದ್ಯರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅವಘಡದಿಂದ ಸಾರ್ವಜನಿಕರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಈ ಅಣಕು ಕಾರ್ಯಚರಣೆಗೆ 40 ನಿಮಿಷ ಕಾಲಾವಕಾಶವನ್ನು ತೆಗೆದುಕೊಳ್ಳಲಾಯಿತು ಎಂದರು.
ಅಮದಳ್ಳಿಯ ನೇವಲ್ ಬೇಸ್ ಬಳಿ ಸಿವಿಲಿಯನ್ ಕಾಲೋನಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಕುರಿತು ಪೊಲೀಸ್ ಕಂಟ್ರೋಲ್ ರೂಂ ಗೆ ಸಂಜೆ 5 ಗಂಟೆಗೆ ಕರೆ ಮೂಲಕ ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ದಳದವರು, ತಹಸೀಲ್ದಾರ್, ವೈದ್ಯರ ತಂಡ, ನೇವಿ ಹಾಗೂ ಕೋಸ್ಟ್ ಗಾರ್ಡ್‌ರವರು ಎಲ್ಲರೂ ಸೇರಿ ಅಣಕು ಕಾರ್ಯಾಚರಣೆ ಮಾಡಲಾಗಿದೆ. ಬೈತಕೂಲ್‌ನಲ್ಲಿ ತುರ್ತು ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಈ ಅಣಕು ಕಾರ್ಯಾಚರಣೆ 43 ನಿಮಿಷ ಕಾಲಾವಕಾಶ ತೆಗೆದುಕೊಳ್ಳಲಾಯಿತು.
ಎಸ್ಪಿ ಎಂ.ನಾರಾಯಣ, ಎಡಿಸಿ ಸಾಜೀದ್ ಮುಲ್ಲಾ ಇದ್ದರು.