ಬಾಲಕರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

KannadaprabhaNewsNetwork | Published : May 13, 2025 1:28 AM
Follow Us

ಸಾರಾಂಶ

ಕಮರಿಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ಸಾವಿರ ಮಠದ ಜಿ.ಅಡ್ಡಾ ನಿವಾಸಿಗಳಾದ ಇಬ್ಬರು ಎದುರು-ಬದುರು ಮನೆಯವರು. ಯಾವ ಕಾರಣಕ್ಕಾಗಿ ಬಾಲಕರ ನಡುವೆ ಜಗಳ ಏರ್ಪಟ್ಟಿದೆ ಎಂಬುದು ಗೊತ್ತಾಗಿಲ್ಲ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ

ಹುಬ್ಬಳ್ಳಿ: ಬಾಲಕರಿಬ್ಬರ ಮಧ್ಯೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಸೋಮವಾರ ಸಂಜೆ ನಗರದಲ್ಲಿ ನಡೆದಿದೆ.

ಇಲ್ಲಿನ ಮೂರುಸಾವಿರ ಮಠದ ಬಳಿಯ ಗುರುಸಿದ್ಧೇಶ್ವರ ನಗರದಲ್ಲಿ 14 ವರ್ಷದ ಬಾಲಕ ಚೇತನ ರಕ್ಕಸಗಿ ಎಂಬುವನಿಗೆ 15 ವರ್ಷದ ಬಾಲಕ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. ಬಾಲಕನನ್ನು ಚಿಕಿತ್ಸೆಗೆಂದು ಕೆಎಂಸಿಆರ್‌ಐಗೆ ಕರೆದುಕೊಂಡು ಬರುವಷ್ಟರಲ್ಲೇ ಮೃತಪಟ್ಟಿದ್ದಾನೆ.

ಕಮರಿಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ಸಾವಿರ ಮಠದ ಜಿ.ಅಡ್ಡಾ ನಿವಾಸಿಗಳಾದ ಇಬ್ಬರು ಎದುರು-ಬದುರು ಮನೆಯವರು. ಯಾವ ಕಾರಣಕ್ಕಾಗಿ ಬಾಲಕರ ನಡುವೆ ಜಗಳ ಏರ್ಪಟ್ಟಿದೆ ಎಂಬುದು ಗೊತ್ತಾಗಿಲ್ಲ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ‌ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ವೃತ್ತಿ ಬದುಕಿನಲ್ಲಿಯೇ ಇಂಥ ಹೃದಯ ವಿದ್ರಾವಕ ಘಟನೆ ನೋಡಿಲ್ಲ. ನಮ್ಮ ಸೊಂಟದ ಎತ್ತರಕ್ಕೂ ಬೆಳೆಯದ ಮಗು, ಚಾಕು ಹಿಡಿದು ಕೊಲೆ ಮಾಡುವಂಥ ಮನಸ್ಥಿತಿಗೆ ಬಂದಿದೆ ಎಂದರೆ ಪೋಷಕರು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

ಇಬ್ಬರು ಬಾಲಕರು ಎದುರು–ಬದುರು ಮನೆಯವರಾಗಿದ್ದು, ಜೊತೆಯಲ್ಲಿಯೇ ಆಡುತ್ತಿದ್ದರು. ಇಬ್ಬರ ನಡುವೆ ಏರ್ಪಟ್ಟ ಕ್ಷುಲ್ಲಕ ಜಗಳವು, ಮತ್ತೊಂದು ಬಾಲಕನ ಕೊಲೆಯಲ್ಲಿ ಅಂತ್ಯವಾಗಿದೆ. ಗಾಯಗೊಂಡ ಬಾಲಕನ್ನು ಕೆಎಂಸಿ–ಆರ್‌ಐ ಆಸ್ಪತ್ರೆಗೆ ತರುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.

ಕೊಲೆಯಾದ ಬಾಲಕನ ತಂದೆ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಕೊಲೆ ಮಾಡಿದ ಬಾಲಕನದ್ದು ಸಹ ಬಡ ಕುಟುಂಬವಾಗಿದೆ ಎಂದರು.

ಒಂದೇ ಓಣಿಯ ಮಕ್ಕಳು: ಬಾಲಕ ಮೃತಪಟ್ಟಿದ್ದಕ್ಕೆ ಆತನ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಮೃತ ಬಾಲಕನ ತಂದೆ ಸೋಮಶೇಖರ್ ಮಾತನಾಡಿ, ಮಾರುಕಟ್ಟೆಗೆ ಹೋದಾಗ ಮಗನನ್ನು ಕೊಲೆ ಮಾಡಲಾಗಿದೆ ಎನ್ನುವ ಸುದ್ದಿ ತಿಳಿಯಿತು. ಇಬ್ಬರು ಒಂದೇ ಓಣಿಯಲ್ಲಿ ಆಡುವ ಮಕ್ಕಳು ಅವರು. ಆಡುವಾಗ ಏನಾಯಿತೋ ಗೊತ್ತಿಲ್ಲ. ಎದುರು ಮನೆಯ ಹುಡುಗನೇ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದು ಕಣ್ಣೀರಾದರು.