ಪಾಕಿಸ್ತಾನ ಎಂದಿಗೂ ಗೆಲ್ಲುವುದಿಲ್ಲ, ಬದಲಾಗಿ ಕೆಣಕುವ ಮನಸ್ಥಿತಿ!

KannadaprabhaNewsNetwork | Published : May 13, 2025 1:27 AM
Follow Us

ಸಾರಾಂಶ

ತಾನು ಶ್ರೀನಗರ ವಾಯುನೆಲೆಯಲ್ಲಿ 1989ರಿಂದ 1991ರ ವರೆಗೆ ಹವಾಲ್ದಾರ್‌ ಆಗಿ ಕೆಲಸ ಮಾಡಿದ್ದೆ ಎಂದು ಚಂಗಪ್ಪ ಹೆಮ್ಮೆಯಿಂದ ಹೇಳುತ್ತಾರೆ.

ನಾವು ಪಿಒಕೆಯನ್ನು ವಶಪಡಿಸಿಕೊಳ್ಳಬೇಕು । ನಿವೃತ್ತ ಹವಾಲ್ದಾರ್ ಚಂಗಪ್ಪ ಅಭಿಪ್ರಾಯ

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಪಾಕಿಸ್ತಾನ ಭಾರತದೊಂದಿಗೆ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ಆದರೆ ಆ ರಾಷ್ಟ್ರ ನಮ್ಮ ಮೇಲೆ ಪದೇ ಪದೇ ಕೆಣಕುವ ಕೆಟ್ಟ ಮನಸ್ಥಿತಿಯನ್ನು ಬಿಡುವುದಿಲ್ಲ. ಇದಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ನಾವು ವಶಪಡಿಸಿಕೊಳ್ಳಬೇಕು.

-ಇದು ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದ ನಿವೃತ್ತ ಹವಾಲ್ದಾರ್ ಪಾಲಂದಿರ ಎ. ಚಂಗಪ್ಪ ಅವರ ಅಭಿಪ್ರಾಯ.

ತಾನು ಶ್ರೀನಗರ ವಾಯು ನೆಲೆಯಲ್ಲಿ 1989ರಿಂದ 1991ರ ವರೆಗೆ ಹವಾಲ್ದಾರ್ ಆಗಿ ಕೆಲಸ ಮಾಡಿದ್ದೆ ಎಂದು ಚಂಗಪ್ಪ ಹೆಮ್ಮೆಯಿಂದ ಹೇಳುತ್ತಾರೆ.

ಪಾಕಿಸ್ತಾನವು ಅಲ್ಲಿನ ಉಗ್ರರನ್ನು ಬಿಟ್ಟು ನಮ್ಮ ದೇಶವನ್ನು ಕೆಣಕುವುದನ್ನು ಮಾಡುತ್ತಲೇ ಇರುತ್ತದೆ. ಇಂತಹ ಘಟನೆಗಳು ಮುಂದೆಯೂ ನಡೆಯುತ್ತದೆ. ಆದ್ದರಿಂದ ನಮ್ಮ ದೇಶ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಬೇಕು. ಇದಾದರೆ ಮಾತ್ರ ಪಾಕಿಸ್ತಾನ ಸುಮ್ಮನಿರುತ್ತದೆ ಎಂದು ಚಂಗಪ್ಪ ಹೇಳುತ್ತಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ನಾವು ವಶಪಡಿಸಿಕೊಂಡಲ್ಲಿ ಬಲೂಚಿಸ್ತಾನ್, ಅಪಘಾನಿಸ್ತಾನ ಕೂಡ ನಮ್ಮ ಬೆಂಬಲಕ್ಕೆ ಬರುತ್ತದೆ. ಇದರಿಂದ ಭಾರತದ ಶಕ್ತಿ ಪಾಕಿಸ್ತಾನಕ್ಕೆ ಗೊತ್ತಾಗುತ್ತದೆ. ಮತ್ತೆ ನಮ್ಮ ದೇಶದ ಮೇಲೆ ಇಂತಹ ಕೃತ್ಯಗಳನ್ನು ಮಾಡಲು ಆಲೋಚನೆ ಮಾಡುತ್ತದೆ ಎಂದು ಅಭಿಪ್ರಾಯಿಸುತ್ತಾರೆ.

ಕರಾಚಿ ಬಂದರನ್ನು ಸೇನೆ ನಾಶ ಪಡಿಸಿದೆ:

ಪಹಲ್ಗಾಮ್ ಘಟನೆಯಿಂದಾಗಿ ನಮ್ಮ ಸೇನೆ ಅಲ್ಲಿನ ಸುಮಾರು 9 ಕಡೆಗಳಲ್ಲಿ ದಾಳಿ ಮಾಡಿ ನೂರಕ್ಕೂ ಅಧಿಕ ಉಗ್ರರನ್ನು ಮಟ್ಟ ಹಾಕಿದೆ. ನಾವು ಕಳುಹಿಸಿದ ಮಿಸೈಲ್ ನಿಂದಾಗಿ ಪಾಕಿಸ್ತಾನದ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಮಾಡಲಾಗಿದೆ. ಅಲ್ಲಿನ ನೌಕಾ ನೆಲೆ ಸೇರಿದಂತೆ ಕರಾಚಿ ಬಂದರನ್ನು ಕೂಡ ನಮ್ಮ ಸೇನೆ ನಾಶ ಪಡಿಸಿದೆ. ಅಲ್ಲದೆ ಪಾಕಿಸ್ತಾನದ ಡಿಫೆನ್ಸ್ ಸಿಸ್ಟಮ್ ಅನ್ನು ಕೂಡ ದ್ವಂಸ ಮಾಡಲಾಗಿದ್ದು, ಇದರಿಂದ ಪಾಕಿಸ್ತಾನ ಸೋತ ಹಾಗೆಯೇ ಎಂದು ಚಂಗಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ.

ಪಾಕ್ ನ ಪ್ರಧಾನಿ ಕದನ ವಿರಾಮ ಹೇಳಿದ್ದರೂ ಕೂಡ ಅಲ್ಲಿನ ಸೇನೆ ಕದನ ವಿರಾಮ ಉಲ್ಲಂಘಿಸಿದೆ. ಇದರಿಂದಲೇ ಅಲ್ಲಿನ ಸೇನೆ, ಪ್ರಧಾನಿಯ ಮಾತನ್ನು ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿದು ಬರುತ್ತಿದ್ದು, ಬದಲಾಗಿ ಸೇನೆ ಹೇಳಿದ್ದನ್ನು ಅಲ್ಲಿನ ಪ್ರಧಾನಿ ಕೇಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಚಂಗಪ್ಪ ವಿವರಿಸಿದರು.

ಸ್ಪಷ್ಟ ಸಂದೇಶ ಸಾರಿದೆ:

ಇನ್ನು ಮುಂದೆ ಭಾರತದ ಮೇಲೆ ಪಾಕಿಸ್ತಾನ ಯಾವುದೇ ದಾಳಿ ನಡೆಸಿದರೂ ಕೂಡ ಅದನ್ನು ಯುದ್ಧವೆಂದು ಪರಿಗಣಿಸಲಾಗುವುದು ಎಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಪಾಕಿಸ್ತಾನ ಮುಂದೆ ಇಂತಹ ಕೃತ್ಯಗಳನ್ನು ನಡೆಸಿದರೆ ಭಾರತ ಸುಮ್ಮನಿರುವುದಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದೆ ಎಂಬುದು ಚಂಗಪ್ಪ ಅವರ ಅಭಿಪ್ರಾಯ.

ಪಾಕಿಸ್ಥಾನ ಬಡ ರಾಷ್ಟ್ರ, ಆದರೆ ಅಲ್ಲಿನ ಸೇನೆ ಬಲಿಷ್ಠವಾಗಿದೆ. ಭಾರತದ ತಾಕತ್ತು ಅವರಿಗೆ ಇನ್ನೂ ಗೊತ್ತಾಗಿಲ್ಲ. ಮೊದಲಿನ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಭಾರತ ಏನು ಮಾಡುವುದಿಲ್ಲ ಎಂಬ ಮನಸ್ಥಿತಿಯನ್ನು ಅವರಿಗೆ ಈಗಲೂ ಇದೆ. ಆದರೆ ಈಗಿನ ಸರ್ಕಾರ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುತ್ತಿದೆ. ಒಂದು ವೇಳೆ ದೊಡ್ಡ ಯುದ್ಧ ಆದರೆ ಪಾಕಿಸ್ತಾನಕ್ಕೆ ತುಂಬಾ ನಷ್ಟ ಆಗಬೇಕು. ಆ ನಷ್ಟದಿಂದ ಅವರು ಚೇತರಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಬೇಕು. ಹೀಗೆ ಆದರೆ ಮಾತ್ರ ಪಾಕಿಸ್ತಾನ ಎಂದಿಗೂ ಭಾರತದ ಜೊತೆ ಕೆಣಕುವ ಕೆಲಸಕ್ಕೆ ಬರುವುದಿಲ್ಲ ಎಂದು ಚಂಗಪ್ಪ ಹೇಳುತ್ತಾರೆ.