ಗೋಕರ್ಣ: ಶ್ರೀ ಕ್ಷೇತ್ರದ ಉಪಾಧಿವಂತರಿಗೆ ಮತ್ತು ರಾಮಚಂದ್ರಾಪುರ ಮಠಕ್ಕೆ ಅವಿನಾಭಾವ ಸಂಬಂಧವಿದೆ. ಎಂಥದ್ದೇ ಪರಿಸ್ಥಿತಿಯಲ್ಲೂ ಉಪಾಧಿವಂತರ ಜತೆ ಶ್ರೀಮಠ ಇರುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಭರವಸೆ ನೀಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು ಐದನೇ ದಿನವಾದ ಸೋಮವಾರ ಗೋಕರ್ಣ ಉಪಾಧಿವಂತರಿಂದ ಭಿಕ್ಷಾಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಶಂಕರಾಚಾರ್ಯರು ಶ್ರೀಮಠ ಸ್ಥಾಪಿಸುವ ಮೊದಲೇ ಇದ್ದ ಪ್ರಾಚೀನ ಮಲ್ಲಿಕಾರ್ಜುನ ದೇವಾಲಯ ಮತ್ತು ಮೂಲಮಠದ ಅಭಿವೃದ್ಧಿಯಲ್ಲಿ ಉಪಾಧಿವಂತರ ಪಾತ್ರ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.ನಮ್ಮ ಮಠದ ಬಹಳಷ್ಟು ಪೂರ್ವಾಚಾರ್ಯರ ಪೂರ್ವಾಶ್ರಮ ಗೋಕರ್ಣ ಕ್ಷೇತ್ರವೇ ಆಗಿದ್ದು, ಗುರುಗಳ, ಪೂರ್ವಜನರ ನಿತ್ಯ ಅನುಸ್ಮರಣೆ ಬೇಕು. ಗೋಕರ್ಣಸ್ಥರಿಗೆ ಸಮಸ್ತ ಗುರುಪರಂಪರೆಯ ಆಶೀರ್ವಾದ ಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳನ್ನು ಬಂದರು ಮತ್ತು ಮೀನುಗಾರಿಕೆ ಖಾತೆ ಸಚಿವ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಅವರು ಕುಟುಂಬ ಸಮೇತ ಭೇಟಿ ಮಾಡಿ ಆಶೀರ್ವಾದ ಪಡೆದರು. ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಭಾಗ್ವತ್, ಹೊನ್ನಪ್ಪ ನಾಯಕ ಜತೆಗಿದ್ದರು.ಗೋಕರ್ಣಸ್ಥರಾದ ಅಮೃತೇಶ ಹಿರೇ, ಪರಮೇಶ್ವರ ಮಾರ್ಕಂಡೆ, ಬಾಲಕೃಷ್ಣ ಜಂಬೆ, ದತ್ತಾತ್ರೇಯ ಹಿರೇಗಂಗೆ, ಪ್ರಶಾಂತ ಹಿರೇಗಂಗೆ, ಲಕ್ಷ್ಮೀನಾರಾಯಣ, ಗಣೇಶ ಮತ್ತಿತರರು ಉಪಸ್ಥಿತರಿದ್ದರು. ಉಪಾಧಿವಂತರಿಂದ ಶ್ರೀಮಠದಲ್ಲಿ ನವಗ್ರಹ ಹವನ, ಮೃತ್ಯುಂಜಯ ಹೋಮ, ಶನಿಶಾಂತಿ ಹೋಮ, ಸರ್ಪಶಾಂತಿ ಮತ್ತು ಧನ್ವಂತರಿ ಹವನ ನಡೆಯಿತು.
ಶ್ರೀರಾಘವೇಶ್ವರ ಭಾರತೀ ಶ್ರೀಗಳ ಆರ್ಶೀವಾದ ಪಡೆದ ಮಂಕಾಳ ವೈದ್ಯ:ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಅವರು ಕುಟುಂಬ ಸಮೇತರಾಗಿ ಇಲ್ಲಿನ ಅಶೋಕೆಗೆ ಭೇಟಿ ನೀಡಿ ಮೂಲ ಮಠದಲ್ಲಿ ಚಾರ್ತುಮಾಸ ವೃತಾಚರಣೆ ಕೈಗೊಂಡಿರುವ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಆಶೀರ್ವಾದ ಪಡೆದರು.