ಬಿಜೆಪಿಯಿಂದ ಬಡವರಿಗೆ ಯೋಜನೆ ತಪ್ಪಿಸಲು ಕುತಂತ್ರ ರಾಜಕಾರಣ

KannadaprabhaNewsNetwork | Published : Apr 29, 2024 1:36 AM

ಸಾರಾಂಶ

ನಿಮ್ಮ ಕುಟುಂಬದ ತೊಂದರೆ, ವಾರ್ಡಿನ ತೊಂದರೆ, ಆರೋಗ್ಯ ತೊಂದರೆ ನಮ್ಮ ತೊಂದರೆ ಇದ್ದಂತೆ

ಗದಗ: ನೀವೆಲ್ಲರೂ ನಮ್ಮ ಪಕ್ಷದ ಹಿತೈಷಿಗಳೇ ಆಗಿದ್ದು, ನಿಮ್ಮ ಒಂದು ಮತ ಕಡಿಮೆಯಾದರೂ ನಮಗೆ ನೋವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ೮ನೇ ವಾರ್ಡನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪ್ರಚಾರಾರ್ಥವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಕುಟುಂಬದ ತೊಂದರೆ, ವಾರ್ಡಿನ ತೊಂದರೆ, ಆರೋಗ್ಯ ತೊಂದರೆ ನಮ್ಮ ತೊಂದರೆ ಇದ್ದಂತೆ ಎಂದರು.

ಆಶ್ರಯ ಕಾಲನಿ, ನೇಕಾರ ಕಾಲನಿ ನಿರ್ಮಾಣವಾಗಲು ಕೆ.ಎಚ್. ಪಾಟೀಲ ಹಾಗೂ ಡಿ.ಆರ್. ಪಾಟೀಲ ಕಾರಣರು. ಚುನಾವಣೆಗೆ ಬಂದಾಗ ನಮ್ಮನ್ನು ಹೊರಗಿಟ್ಟವರಿಗೂ ಈ ಬಾರಿ ತಿಳಿವಳಿಕೆ ಹೇಳಿ, ಮನೆ-ಮನೆಗೆ ಗ್ಯಾರಂಟಿ ಕಾರ್ಡ್‌ ತಲುಪಿಸಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಪೂರ್ಣ ಪ್ರಮಾಣದ ಆಶೀರ್ವಾದ ಮಾಡಬೇಕು. ಕನಿಷ್ಠ ೧,೦೦೦ ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಶ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ₹೧ ಲಕ್ಷ ನೀಡುವುದಾಗಿ ಘೋಷಿಸಿದ್ದು, ಈ ಕುರಿತು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದರೆ, ಗ್ಯಾರಂಟಿ ವಿರುದ್ಧ ಬಿಜೆಪಿ ಮುಖಂಡರು ಬಡವರಿಗೆ ಹಣ ಮುಟ್ಟಬಾರದು ಎನ್ನುವ ಉದ್ದೇಶದಿಂದ ಗ್ಯಾರಂಟಿ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಆದ್ದರಿಂದ ಬಡವರಿಗೆ ದ್ರೋಹ ಮಾಡುತ್ತಿರುವ ಬಿಜೆಪಿಗೆ ಮತ ನೀಡದೇ ಕಾಂಗ್ರೆಸ್ ಅಭ್ಯರ್ಥಿಗೆ ಅಧಿಕ ಮತ ನೀಡುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವಂತೆ ಆಶೀರ್ವದಿಸಬೇಕು ಎಂದರು.

ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ೫ನೇ ವಾರ್ಡಿನಲ್ಲಿ ನೇಕಾರರು, ಕೂಲಿಕಾರ್ಮಿಕರು ಹಾಗೂ ಬಡವರು ಹೆಚ್ಚಿದ್ದು, ಕಳೆದ ನಾಲ್ಕೈದು ಚುನಾವಣೆಗಳಲ್ಲಿ ಕಡಿಮೆ ಮತ ನೀಡಿ ನೋವು ಮಾಡಿದ್ದೀರಿ. ಈ ಬಾರಿ ಅಧಿಕ ಮತ ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವಿಗೆ ಕಾರಣರಾಗಬೇಕು ಎಂದರು.

ಈ ವೇಳೆ ನಗರಸಭೆ ಮಾಜಿ ಸದಸ್ಯ ಅಶೋಕ ಬಣ್ಣದ ಮಾತನಾಡಿದರು. ಮುಖಂಡರಾದ ಪ್ರಭು ಬುರಬುರೆ, ಅಕ್ಬರಸಾಬ್ ಬಬರ್ಚಿ, ಮರ್ದಾನಸಾಬ್ ಕಾತರಕಿ, ಇಮಾಮ್‌ಸಾಬ್ ಬೋದ್ಲೇಖಾನ್, ಶಾಕೀರ್ ಕಾತರಕಿ, ನಾಗಲಿಂಗ ಐಲಿ, ಸುರೇಶ ಕಟ್ಟಿಮನಿ, ವೀರಪ್ಪ ನಾಯ್ಕರ, ಬಾಬು ನರಸಾಪೂರ, ಸಂಗಮೇಶ ಹಾದಿಮನಿ, ಬಾಲರಾಜ ಅರಬರ ಸೇರಿ ಅನೇಕರು ಇದ್ದರು.

Share this article