ಕನ್ನಡಪ್ರಭ ವಾರ್ತೆ ಹಾವೇರಿ
ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ನಡೆಸಿದ ನಕಲಿ ಕಾರ್ಡ್‌ಗಳ ಪರಿಶೀಲನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೈಜ ಕಾರ್ಮಿಕರ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಇದನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಎಐಟಿಯುಸಿ, ಐಎನ್‌ಟಿಯುಸಿ ಸಂಯೋಜಿತ ಸಂಘಟನೆಗಳು ಹಾಗೂ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಬುಧವಾರ ನಗರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ದೇವಗಿರಿ ಗ್ರಾಮದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡಿತು. ನಂತರ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿನ ಕಾರ್ಮಿಕ ಕಾರ್ಡ್‌ಗಳು ಇವೆ ಎಂಬ ಕಾರಣದಿಂದ ರಾಜ್ಯ ಸರ್ಕಾರದ ಆದೇಶದಂತೆ ನಕಲಿ ಕಾರ್ಮಿಕ ಕಾರ್ಡಗಳ ಪರಿಶೀಲನೆಗೆ ಸರ್ಕಾರವು ಸುಮಾರು ೭೫ ಕಾರ್ಮಿಕ ಅಧಿಕಾರಿಗಳನ್ನು ಜಿಲ್ಲೆಗೆ ಕಳುಹಿಸಿದ್ದು ಈ ಎಲ್ಲ ಅಧಿಕಾರಿಗಳು ಪ್ರತಿಯೊಂದು ತಾಲೂಕಿಗೆ ಹಂಚಿಕೆಯಾಗಿ ನಕಲಿ ಕಾರ್ಡ್‌ಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಪರಿಶೀಲನೆಯ ಭರದಲ್ಲಿ ನೈಜ ಕಾರ್ಮಿಕರು ಮತ್ತು ಅವರಿಗೆ ಕಾರ್ಮಿಕ ಇಲಾಖೆಯಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ತಿರಸ್ಕರಿಸಿದ್ದಾರೆ ಎಂದು ದೂರಿದರು.ಈ ತಿರಸ್ಕೃತಗೊಂಡ ಕಾರ್ಡುಗಳಲ್ಲಿ ನೈಜ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಕಾರ್ಮಿಕರ ಜೊತೆಗೆ ಐ.ಎನ್.ಟಿ.ಯು.ಸಿ ಸಂಯೋಜಿತ ಸಂಘಗಳು ಹಾಗೂ ಹಾವೇರಿ ಜಿಲ್ಲೆಯ ಎಲ್ಲಾ ಕಾರ್ಮಿಕ ಸಂಘಟನೆಗಳು ಸೇರಿ ಸರ್ಕಾರ ಮತ್ತು ಕಾರ್ಮಿಕ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರ ನೇತೃತ್ವದಲ್ಲಿ ಮರುಪರಿಶೀಲನೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕಾರ್ಮಿಕ ಇಲಾಖೆಯ ವೆಬ್‌ಸೈಟ್ ಲೋಪದೋಷಗಳಿಂದ ಕೂಡಿದ್ದು ಕಾರ್ಮಿಕರ ಯಾವುದೇ ಸೌಲಭ್ಯಗಳಿಗೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ದೂರವಾಣಿ ಕರೆಗಳ ಮೂಲಕ ಕಾರ್ಡ್‌ಗಳ ಪರಿಶೀಲನೆಯಾಗಿದೆ. ಗ್ರಾಮಗಳಲ್ಲಿ ಕಾರ್ಮಿಕರ ಕೆಲಸದ ಸ್ಥಳಕ್ಕೆ ಹೋಗದೇ ಗ್ರಾಮದ ಸ್ಥಳೀಯ ಜನರು, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಮೂಲಕ ಪರಿಶೀಲನೆ ಮಾಡಲಾಗಿದೆ. ಈಗಾಗಲೇ ಇಲಾಖೆಯ ವೆಬ್‌ಸೈಟ್ ತಂತ್ರಾಂಶದಲ್ಲಿ ತೊಂದರೆಯಾಗಿ ಇಲ್ಲಿಯವರೆಗೂ ಕಾರ್ಮಿಕ ಸೌಲಭ್ಯಗಳಿಗೆ ಅರ್ಜಿ ಹಾಕಲು ವಿಳಂಬವಾಗಿದ್ದರಿಂದ ಅಂತಹ ಕಾರ್ಮಿಕರಿಗೆ ಅರ್ಜಿ ಹಾಕಲು ಕಾಲಾವಕಾಶ ನೀಡಬೇಕು. ಈಗಾಗಲೇ ನಿಜವಾದ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳು ತಿರಸ್ಕೃತಗೊಂಡಿದ್ದು, ತಿರಸ್ಕೃತಗೊಂಡ ನಿಜವಾದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಎಐಟಿಯುಸಿ ಜಿಲ್ಲಾಧ್ಯಕ್ಷ ಎಂ.ಡಿ. ಕಾಲೇಬಾಗ್, ಮುಖಂಡರಾದ ಹೇಮಣ್ಣ ದೊಡ್ಡಮನಿ, ಐ.ಕೆ. ನದಾಫ್, ಕೆ.ಎಲ್. ಮಕಾಂದಾರ, ಎ.ಎಂ. ಪಟವೇಗಾರ, ಸಾಬೀರ ಕಡಕೋಳ, ರೇಖಾ ಬನ್ನಿಕೊಪ್ಪ, ಜಿಲಾನಿ ಓಲೇಕಾರ, ಸಾಭಿರ ಅಂಬೂರ, ಮುಸ್ತಾಖ್ ಬಳ್ಳಾರಿ, ರಜಾಕ್ ಕುಂದೂರ, ಜಾಫರ್ ಗವಾರಿ ಇತರರು ಇದ್ದರು.