ಕೊಡಗು ವಿವಿ ಉಳಿಸುವಂತೆ ಒತ್ತಾಯಿಸಿ ಸೋ. ಪೇಟೆಯಲ್ಲಿ ಬೃಹತ್ ಪ್ರತಿಭಟನೆ

KannadaprabhaNewsNetwork | Published : Apr 28, 2025 11:50 PM

ಸಾರಾಂಶ

ಕೊಡಗು ವಿವಿ ಉಳಿಸಿಕೊಳ್ಳಲೇಬೇಕೆಂಬ ಹಕ್ಕೊತ್ತಾಯವನ್ನು ಮಂಡಿಸುವ ಮೂಲಕ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲೇಬೇಕೆಂಬ ಹಕ್ಕೊತ್ತಾಯವನ್ನು ಮಂಡಿಸುವ ಮೂಲಕ ಸೋಮವಾರ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ನಂತರ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಮಾತನಾಡಿ, ಕೊಡಗು ವಿಶ್ವವಿದ್ಯಾಲಯವನ್ನು ರದ್ದುಪಡಿಸುವುದು ಅಥವಾ ವಿಲೀನಗೊಳಿಸುವುದಕ್ಕೆ ಮುಂದಾದರೆ ಅದರ ದುಷ್ಪರಿಣಾಮವನ್ನು ಸರ್ಕಾರವೇ ಎದುರಿಸಬೇಕಾಗುತ್ತದೆ ಎಂದರು. ಕೊಡಗು ವಿಶ್ವವಿದ್ಯಾಲಯವನ್ನು ವಿಲೀನ ಮಾಡುವುದಿಲ್ಲ ಎಂದು ಇದೂವರೆಗೆ ಸರ್ಕಾರ ಅಧಿಕೃತ ಹೇಳಿಕೆ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ವಿಶ್ವವಿದ್ಯಾಲಯಕ್ಕೆ ಸೇರಲು ಭಯಪಡುತ್ತಿದ್ದಾರೆ ಎಂದರು. ಜನಪ್ರತಿನಿಧಿಗಳು,ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದೆ. ಜಿಲ್ಲೆಯ ಶಾಸಕರು ಕೂಡ ಇದರ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಿಲ್ಲ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ಸರ್ಕಾರ ಕೂಡಲೇ ವಿಶ್ವವಿದ್ಯಾನಿಲಯಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಬೇಕು.

ತಕ್ಷಣವೇ ಫೀಲ್ಡ್‌ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರನ್ನು ವಿಶ್ವವಿದ್ಯಾನಿಲಯಕ್ಕೆ ಇಡಬೇಕು ಎಂದು ಮನವಿ ಮಾಡಿದರು. ಈ ಹಿಂದೆ ಕೊಡಗು ರಾಜ್ಯವಾಗಿದ್ದಾಗ ಸಮೃದ್ಧವಾಗಿತ್ತು. ಕರ್ನಾಟಕದೊಂದಿಗೆ ವಿಲೀನವಾದ ನಂತರ ಯಾವುದೇ ಸರ್ಕಾರಗಳು ಹೆಚ್ಚಿನ ಭರವಸೆ ಈಡೇರಿಸಲಿಲ್ಲ. ಈಗ ವಿಶ್ವವಿದ್ಯಾಲಯವನ್ನು ರದ್ದು ಮಾಡುವ ಹಂತಕ್ಕೆ ತಲುಪಿದ್ದಾರೆ ಎಂದರು. ರೈತರು, ಬಡವರು, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ-ಪಂಗಡದವರು ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ ಜಿಲ್ಲೆಯ ಶಾಸಕರಾದ ಡಾ.ಮಂತರ್‌ಗೌಡ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮನಸ್ಸು ಮಾಡಿದರೆ ಕೊಡಗು ವಿಶ್ವವಿದ್ಯಾಲಯವನ್ನು ವಿಲೀನ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಪ್ರತಿಭಟನಾ ಸಭೆಯಲ್ಲಿ ಕಾರ್ಯದರ್ಶಿ ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಂಧ್ಯಾ ಗಣೇಶ್, ನಗರಾಧ್ಯಕ್ಷ ಮಂಜುನಾಥ್, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಅಧ್ಯಕ್ಷರು, ತಾಲೂಕು ಮತ್ತು ಹೋಬಳಿ ಘಟಕದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Share this article