ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ನ್ಯಾಯಾಲಯ ಸೇರಿದಂತೆ ವಿವಿಧೆಡೆಗಳಲ್ಲಿ ಬುಧವಾರ ಬಾಂಬ್ ನಿಷ್ಕ್ರಿಯ ದಳದ ತಂಡ ತಪಾಸಣೆ ನಡೆಸಿತು.ಬಾಂಬ್ ನಿಷ್ಕ್ರಿಯ ದಳ ತಂಡ ದಿಢೀರ್ ತಪಾಸಣೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ಹಾಗೂ ವಿಚಾರಣೆಗೆ ಆಗಮಿಸಿದ್ದ ಕಕ್ಷಿದಾರರಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ತಪಾಸಣೆಗೆ ಆಗಮಿಸಿದ್ದ ಶ್ವಾನ ದಳ ಹಾಗೂ ಬಾಂಬ್ ಪತ್ತೆದಳದ ತಂಡ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ, ಪ್ರಧಾನ ಹಾಗೂ ಹೆಚ್ಚುವರಿ ನ್ಯಾಯಾಲಯದ ಒಳ ಮತ್ತು ಹೊರ ಆವರಣ, ಕಾರು ಹಾಗೂ ದ್ವಿಚಕ್ರ ವಾಹನ ನಿಲ್ದಾಣ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಲಾಯಿತು.ನಂತರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ರೈಲು ನಿಲ್ದಾಣ ಒಳಗೊಂಡಂತೆ ಜನನಿ ಬಿಡ ಪ್ರದೇಶಗಳಲ್ಲಿ ಬಾಂಬ್ ಪತ್ತೆದಳದ ತಂಡ ತಪಾಸಣೆನಡೆಸಿ ತೆರಳಿತು. ತಪಾಸಣೆ ಕಾರ್ಯ ಸಾಮಾನ್ಯವಾಗಿದ್ದು. ಪ್ರತಿ ವಾರಕ್ಕೊಮ್ಮೆ ನ್ಯಾಯಾಲಯ, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ ಎಂದು ಬಾಂಬ್ ಪತ್ತೆದಳ ತಂಡ ಸ್ಪಷ್ಟಪಡಿಸಿದೆ.ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಮದ್ದೂರು:
ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಟ್ಟಣದ ಶಿವಪುರದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗುಂಪು ವಿಭಾಗದ ವಿದ್ಯಾರ್ಥಿ ಗಳಾದ ಎಸ್.ರೇವತಿ, ಆರ್ಮೈನಮುದಾಸೀರ್ ಮತ್ತು ಶಿಕ್ಷಕ ಎನ್. ಶಶಿಧರ್ ಪ್ರಥಮ ಬಹುಮಾನ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಮೇಘನಾ ಎಸ್ ಗೌಡ ತೃತೀಯ, ಶಿಕ್ಷಕರ ವಿಭಾಗದಲ್ಲಿ ಟಿ.ಎಸ್. ಸತ್ಯನಾರಾಯಣ ದ್ವಿತೀಯ ಬಹುಮಾನ ಪಡೆದುಕೊಂಡು ತಾಲೂಕಿಗೆ ಮತ್ತು ವಿದ್ಯಾಸಂಸ್ಥೆಗೆ ಕೀರ್ತಿ ತಂದಿದ್ದಾರೆ.ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ಬಹುಮಾನ ವಿಜೇತರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಕಾಳೀರಯ್ಯ, ವಿದ್ಯಾಸಂಸ್ಥೆ ಅಧ್ಯಕ್ಷೆ ಪಿ.ಕಸ್ತೂರಿ, ಕಾರ್ಯದರ್ಶಿ ಹೆಚ್.ಆರ್. ಅನಂತೇಗೌಡ, ಡಯಟ್ ಪ್ರಾಂಶುಪಾಲ ಪುರುಷೋತ್ತಮ್ , ಹಿರಿಯ ಉಪನ್ಯಾಸಕಿ ರೇಣುಕಮ್ಮ, ಉಪನ್ಯಾಸಕ ಬಿ.ಜಿ.ನಾಗರಾಜ್ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.