ಲೋಕಾಯುಕ್ತ ಅಧಿಕಾರಿಗಳ ತಂಡಗಳಿಂದ ಪರಿಶೀಲನೆ

KannadaprabhaNewsNetwork |  
Published : Jun 17, 2025, 11:57 PM IST
ಹೊನ್ನಾಳಿ ಪೋಟೋ 17ಎಚ್.ಎಲ್.ಐ2ಎ.  ಲೋಕಾಯುಕ್ತ ಇನ್ಸಪೆಕ್ಟರ್ ಸರಳ ನೇತೃತ್ವದ ತಂಡ ತಾಲೂಕು ಕಚೇರಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಪಟ್ಟಣದ ತಾಲೂಕು ಕಚೇರಿ ಹಾಗೂ ಉಪ ನೋಂದಣಿ ಕಚೇರಿಗಳಿಗೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ, ಕಡತಗಳನ್ನು ಪರಿಶೀಲಿಸಿದ್ದಾರೆ.

- ಉಪ ನೋಂದಣಾಧಿಕಾರಿ ಕಚೇರಿ, ತಾಲೂಕು ಕಚೇರಿಗೆ 2 ತಂಡಗಳು ಭೇಟಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ತಾಲೂಕು ಕಚೇರಿ ಹಾಗೂ ಉಪ ನೋಂದಣಿ ಕಚೇರಿಗಳಿಗೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ, ಕಡತಗಳನ್ನು ಪರಿಶೀಲಿಸಿದರು.

ದಾವಣಗೆರೆಗೆ ಇತ್ತೀಚಿಗೆ ಆಗಮಿಸಿದ್ದ ಉಪ ಲೋಕಾಯುಕ್ತ ಹಾಗೂ ಹೊನ್ನಾಳಿಗೆ ಭೇಟಿ ನೀಡಿದ್ದ ದಾವಣಗೆರೆ ಲೋಕಾಯುಕ್ತ ಎಸ್‌ಪಿ ಅವರಿಗೆ ಕೆಲ ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಸಕಾಲದಲ್ಲಿ ಕೆಲಸಗಳು ಆಗುತ್ತಿಲ್ಲ, ಪ್ರತಿಯೊಂದಕ್ಕೂ ಕಚೇರಿಗಳಿಗೆ ಅಲೆದಾಡಿಸುತ್ತಾರೆ ಎಂಬ ದೂರುಗಳು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಎಸ್‌ಪಿ ಆದೇಶದಂತೆ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ಅಧಿಕಾರಿಗಳ ತಂಡ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿತು. ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಸರಳ, ಪ್ರಭು ಸುರೇನಾ ಅವರ ತಂಡ ತಾಲೂಕು ಕಚೇರಿಗೆ ಭೇಟಿ ನೀಡಿ, ಸಾರ್ವಜನಿಕರ ದೂರಿನ ಅನ್ವಯ ಕಡತಗಳನ್ನು ಪರಿಶೀಲಿಸಿತು.

ಹೊನ್ನಾಳಿ ಉಪ ನೋಂದಣಾಧಿಕಾರಿ ನವೀನ್‌ಕುಮಾರ್ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಕೆಲ ಕಡತಗಳನ್ನು ಪರಿಶೀಲನೆಗೆ ಒದಗಿಸಿದರು. ಈ ಹಂತದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನಿಮ್ಮ ಕಚೇರಿ ಮಹಡಿ ಮೇಲೆ ಇರುವ ಕಾರಣ ವೃದ್ಧರು, ಮಹಿಳೆಯರು ನೋಂದಣಿ ಕೆಲಸಕ್ಕೆ ಕಚೇರಿಗೆ ಬರಬೇಕಾದರೆ ಅನಾನುಕೂಲ ಆಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಆಗ ಉಪನೋಂದಣಾಧಿಕಾರಿ ಉತ್ತರಿಸಿ, ಈಗಾಗಲೇ ಕಟ್ಟಡ ಮಾಲೀಕರ ಬಳಿ ಚರ್ಚಿಸಿದ್ದು, 15-20 ದಿನಗಳ ಒಳಗಾಗಿ ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆಂದು ಉತ್ತರಿಸಿದರು. ಆಸ್ತಿ ನೋಂದಣಿಗೆ ಬರುವ ವ್ಯಕ್ತಿಗಳ ನಿಖರತೆಗಾಗಿ ಅವರ ಆಧಾರ್, ಪಾನ್‌ ಕಾರ್ಡ್‌ಗಳನ್ನು ಪರಿಶೀಲಿಸಿ ನೋಂದಣಿ ಮಾಡಿಕೊಡಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.

ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಸರಳ ನೇತೃತ್ವದ ಅಧಿಕಾರಿಗಳ ಮತ್ತೊಂದು ತಂಡ ತಾಲೂಕು ಕಚೇರಿಗೆ ಭೇಟಿ ನೀಡಿತು. ವಿಶೇಷವಾಗಿ ಆಹಾರ ಶಾಖೆ, ದಾಖಲೆಗಳ ಶಾಖೆಗಳಲ್ಲಿ ಪರಿಶೀಲನೆ ನಡೆಸಲಾಯಿತು.

ಆಹಾರ ಶಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂದರ್ಭ ಅಲ್ಲಿನ ಆಹಾರ ನಿರೀಕ್ಷಕರು ಮಾಹಿತಿ ನೀಡಿ, ಪಟ್ಟಣದಲ್ಲಿ ವಿಎಸ್‌ಎಸ್‌ಎನ್ ಸಂಘದ 16 ಹಾಗೂ ಇತರೆ ಖಾಸಗಿಯಾಗಿ 50 ಸೇರಿದಂತೆ ಒಟ್ಟು 66 ನ್ಯಾಯಬೆಲೆ ಅಂಗಡಿಗಳಿವೆ. ಅನ್ನ ಅಂತ್ಯೋದಯ, ಬಿಪಿಎಲ್ ಸೇರಿದಂತೆ ಒಟ್ಟು 35,850 ಕಾರ್ಡ್‌ಗಳಿದ್ದು, ಒಟ್ಟು 1,270,88 ಕಾರ್ಡುದಾರರು ಇದ್ದಾರೆ ಎಂದು ವಿವರಿಸಿದರು.

ಅಕ್ರಮ ಅಕ್ಕಿ ಸಾಗಾಣಿಕೆ ಪ್ರಕರಣಗಳನ್ನು ಎಷ್ಟು ದಾಖಲಿಸಿದ್ದಿರಿ ಎಂದು ಆಹಾರ ನಿರೀಕ್ಷಕರಿಗೆ ದಾಖಲೆ ಕೊಡಿ ಎಂದು ಕೇಳಿದಾಗ, ಅಧಿಕಾರಿಗಳು ನಿರುತ್ತರಾದರು. ಆಹಾರ ಶಾಖೆಯಲ್ಲಿ ಸಮರ್ಪಕವಾಗಿ ದಾಖಲೆಗಳನ್ನು ನಿರ್ವಹಣೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

- - -

-17ಎಚ್.ಎಲ್.ಐ2.ಜೆಪಿಜಿ: ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿತು.

-17ಎಚ್.ಎಲ್.ಐ2ಎ.ಜೆಪಿಜಿ: ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಸರಳ ನೇತೃತ್ವದ ತಂಡ ಹೊನ್ನಾಳಿ ತಾಲೂಕು ಕಚೇರಿಗೆ ಭೇಟಿ ನೀಡಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ