ಸಂಡೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸ್ಥಳ ಪರಿಶೀಲನೆ

KannadaprabhaNewsNetwork |  
Published : Jan 14, 2024, 01:31 AM ISTUpdated : Jan 14, 2024, 05:24 PM IST
ಸಂಡೂರು ಬಳಿಯ ಧರ್ಮಾಪುರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ೨೫೦ ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಾಗವನ್ನು ಶನಿವಾರ ಶಾಸಕ ಈ. ತುಕಾರಾಮ್ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ವೀಕ್ಷಿಸಿದರು.  | Kannada Prabha

ಸಾರಾಂಶ

ಸಂಡೂರಿನಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನ ೧೮೦ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೨೫೦ ಬೆಡ್‌ನ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ಸ್ಥಳವನ್ನು ವಿಜಯನಗರ ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ಪರಿಶೀಲಿಸಿದರು.

ಸಂಡೂರು: ಸಂಡೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಧರ್ಮಾಪುರದಲ್ಲಿನ ಬೈಪಾಸ್ ಎದುರುಗಡೆ ಇರುವ ಸರ್ಕಾರಿ ಜಾಗದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನ ₹೧೮೦ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೨೫೦ ಬೆಡ್‌ನ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ಹಾಗೂ ಗ್ರಾಮದ ೩ ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ನಿರ್ಮಾಣದ ಸ್ಥಳವನ್ನು ಶನಿವಾರ ಶಾಸಕ ಈ. ತುಕಾರಾಮ್ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಪರಿಶೀಲಿಸಿದರು. 

ಶಾಸಕರು ಮಾತನಾಡಿ, ಈ ಸ್ಥಳ ರಾಜ್ಯ ಹೆದ್ದಾರಿ ಪಕ್ಕದಲ್ಲಿದೆ. ಇಲ್ಲಿರುವ ೩೨ ಎಕರೆ ಜಾಗದಲ್ಲಿ ೧೧ ಎಕರೆ ಪ್ರದೇಶದಲ್ಲಿ ೨೫೦ ಬೆಡ್‌ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು, ೫ ಎಕರೆಯಲ್ಲಿ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ) ತರಬೇತಿ ಕೇಂದ್ರ ಹಾಗೂ ಇನ್ನುಳಿದ ಜಾಗವನ್ನು ಇನ್ನಿತರ ಸರ್ಕಾರಿ ಉಪಯೋಗಕ್ಕೆ ಮೀಸಲಿಡಲು ಉದ್ದೇಶಿಸಲಾಗಿದೆ. 

ಉದ್ದೇಶಿತ ಸ್ಥಳದಲ್ಲಿ ಆಸ್ಪತ್ರೆ ನಿರ್ಮಿಸುವುದರಿಂದ ತಾಲೂಕಿನ ಜನತೆಗೆ ಮಾತ್ರವಲ್ಲದೆ, ತಾಲೂಕಿಗೆ ಹೊಂದಿಕೊಂಡಿರುವ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಜನತೆಗೂ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. 

ಫೆಬ್ರುವರಿ ತಿಂಗಳಲ್ಲಿ ಮುಖ್ಯಮಂತ್ರಿಯಿಂದ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಉದ್ದೇಶಿಸಿದ್ದು, ಅಧಿಕಾರಿಗಳು ಈ ಕುರಿತು ಅಗತ್ಯವಿರುವ ಕ್ರಮಗಳನ್ನು ಶೀಘ್ರ ಕೈಗೊಳ್ಳಬೇಕು ಎಂದರು.

ಸ್ಥಳ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಹಾಗೂ ಜಿಲ್ಲಾ ವೈದ್ಯಾಧಿಕಾರಿ ವೈ. ರಮೇಶ್ ಬಾಬು ಅವರು ಆಸ್ಪತ್ರೆ ನಿರ್ಮಾಣಕ್ಕೆ ಉದ್ದೇಶಿತ ಜಾಗ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಪರ್ಯಾಯ ಜಾಗದ ವ್ಯವಸ್ಥೆಯ ಭರವಸೆ: ಧರ್ಮಾಪುರದಲ್ಲಿನ ೩ ಎಕರೆ ಸರ್ಕಾರಿ ಜಾಗ, ಉದ್ದೇಶಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣ ಜಾಗದಲ್ಲಿ ಸುಮಾರು ೨೦ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿವೆ. 

ಶಾಸಕರು ಹಾಗೂ ಜಿಲ್ಲಾಧಿಕಾರಿ ಸ್ಥಳ ಭೇಟಿಗೆ ಆಗಮಿಸಿದಾಗ, ಅಲ್ಲಿನ ನಿವಾಸಿಗಳಾದ ಬೋರಮ್ಮ, ಕರಿಯಮ್ಮ ಮುಂತಾದವರು ತಮಗೆ ಪರ್ಯಾಯ ಮನೆಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. 

ಶಾಸಕರು ಮಾತನಾಡಿ, ಗ್ರಾಮದ ಬಳಿಯಲ್ಲಿ ೧.೫೦ ಎಕರೆ ಸರ್ಕಾರಿ ಜಮೀನಿದೆ. ಅಲ್ಲಿ ಉದ್ದೇಶಿತ ಹಾಸ್ಟೆಲ್ ನಿರ್ಮಾಣದ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ್, ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ