ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಬಸ್ ನಿಲ್ದಾಣದ ಪ್ರವೇಶದ್ವಾರ ಗುಂಡಿ ಮುಚ್ಚುವ ಶಾಶ್ವತ ಕಾಮಗಾರಿ ನಡೆಸಲು ಅಧಿಕಾರಿಗಳು ಪರಿಶೀಲನೆ ನಡೆಸಿದರು.ಪಟ್ಟಣದ ಬಸ್ ನಿಲ್ದಾಣದ ಪ್ರವೇಶದ್ವಾರ ಗುಂಡಿಬಿದ್ದು ಅಪಘಾತ ಸಂಭವಿಸುವ ಬಗ್ಗೆ ಮಾಹಿತಿ ಪಡೆದು ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಮತ್ತು ಕರವೇ ಅಧ್ಯಕ್ಷ ಚಂದ್ರಶೇಖರ್ ಇತರರು, ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದು, ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಂದು ಗುಂಡಿ ಮುಚ್ಚಲು ಶಾಶ್ವತ ಕಾಮಗಾರಿ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು. ರಸ್ತೆ ಸಾರಿಗೆ ಅಧಿಕಾರಿಗಳಿಗೆ ಗಡುವು ನೀಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಚನ್ನಕೇಶವ ದೇಗುಲ ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ಬರುವ ಸ್ಥಳದಲ್ಲಿನ ಬಸ್ ನಿಲ್ದಾಣದ ಪ್ರವೇಶದ್ವಾರ ಕಳೆದ ಐದಾರು ವರ್ಷದಿಂದ ಗುಂಡಿಬಿದ್ದು ಅಪಘಾತದ ಜೊತೆಗೆ ಬಸ್‌ಗಳ ಹಿಂಭಾಗ ಜಖಂಗೊಳ್ಳುವ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ನಾವು ಮತ್ತು ಕರವೇ ಅಧ್ಯಕ್ಷರು ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ಸಾರಿಗೆ ಅಧಿಕಾರಿಗಳಿಗೆ ಗಡುವು ನೀಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಮತ್ತು ಎಂಜಿನಿಯರ್ ಶ್ರೀಧರ್ ಸ್ವಾಮಿ ಬಂದು ಪರಿಶೀಲನೆ ನಡೆಸಿ ಶೀಘ್ರವೇ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ. ಅಲ್ಲದೆ ಲೋಕೋಪಯೋಗಿ ಇಲಾಖೆಯೊಂದಿಗೆ ಮಾತನಾಡಿ, ಮೂರು ಇಲಾಖೆ ಸಹಯೋಗದಿಂದ ಕಾಮಗಾರಿ ನಡೆಸಲು ಬೆಂಬಲ ನೀಡುವ ಬಗ್ಗೆ ತಿಳಿಸಿದರು.ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಮಾತನಾಡಿ, ಪುರಸಭಾ ಅಧ್ಯಕ್ಷರು ದೂರಿನ ಅನ್ವಯ ನಾವು ಮತ್ತು ಎಂಜಿನಿಯರ್ ಅವರು ಭೇಟಿ ನೀಡಿದ್ದು, ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆಯ ಬೆಂಬಲದಿಂದ ಗುಂಡಿಬಿದ್ದ ಪ್ರವೇಶದ್ವಾರ ತೀವ್ರ ಇಳಿಜಾರಿನ ಹಿನ್ನೆಲೆಯಲ್ಲಿ ಎತ್ತರಕ್ಕೆ ಏರಿಸಲಾಗುತ್ತದೆ. ಸತತ ಒಂದು ತಿಂಗಳ ಕಾಮಗಾರಿ ನಡೆಯುವ ನಿಟ್ಟಿನಲ್ಲಿ ಬಸ್ ನಿಲ್ದಾಣದಲ್ಲಿ ಹೊರ ಪ್ರವೇಶದ ದ್ವಾರದ ಆಟೋ ನಿಲ್ದಾಣ ಬಳಿ ತಡೆಗೋಡೆಯನ್ನು ತೆರವು ಮಾಡಿ ತಾತ್ಕಾಲಿಕ ಬಸ್ ಸಂಚಾರಕ್ಕೆ ಅನುವು ಮಾಡಲಾಗುತ್ತದೆ. ಸರ್ವರು ಸಹಕಾರ ನೀಡುವ ಮೂಲಕ ಉತ್ತಮ ಕಾಮಗಾರಿ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕಿ ಶಾಜೀಯಾ, ಸಂಚಾರ ನಿಯಂತ್ರಣಾಧಿಕಾರಿ ಚಂದ್ರೇಗೌಡ, ಕರವೇ ಅಧ್ಯಕ್ಷ ಚಂದ್ರಶೇಖರ್ ವೆಂಕಟೇಶ್, ರಘು ಹಾಜರಿದ್ದರು.