ಕುಮಟಾ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆತ್ಮಸ್ಥೈರ್ಯ ತುಂಬಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮಹತ್ವದ ಕಾರ್ಯ ಮಾಡುತ್ತಿದೆ. ಜನಜಾಗೃತಿ ವೇದಿಕೆಯ ಮೂಲಕ ಮದ್ಯಪಾನ ಮತ್ತು ಇತರ ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ವ್ಯಸನಮುಕ್ತ ಜೀವನಕ್ಕೆ ಪ್ರೇರಣೆ ನೀಡಲಾಗುತ್ತಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆ ಕರಾವಳಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹೇಳಿದರು.
ಆರ್ಥಿಕ ಅಭಿವೃದ್ಧಿಯ ಜತೆಗೆ ಸಾಮಾಜಿಕ ಜಾಗೃತಿ, ಕುಟುಂಬದ ನೆಮ್ಮದಿ, ಮಹಿಳಾ ಸಬಲೀಕರಣ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡುತ್ತಿದೆ. ಪಾನಮುಕ್ತರಾದವರು ತಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಂಡು, ವ್ಯಸನದ ಸುಳಿಯಲ್ಲಿ ಸಿಲುಕಿರುವವರಿಗೆ ಮಾರ್ಗದರ್ಶನ ನೀಡಬೇಕು. ಕುಟುಂಬದ ಪ್ರೀತಿ, ಸಮಾಜದ ಸಹಕಾರ ಹಾಗೂ ದೃಢಸಂಕಲ್ಪದಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಗಂಗಾಧರ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಮಹಾತ್ಮ ಗಾಂಧಿಯವರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪ. ಮದ್ಯಪಾನ ಮತ್ತು ಇತರ ದುಶ್ಚಟಗಳಿಂದ ದೂರವಿರುವುದು ಉತ್ತಮ ಆರೋಗ್ಯ, ನೆಮ್ಮದಿಯ ಕುಟುಂಬ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮೊದಲ ಹೆಜ್ಜೆ. ವ್ಯಸನಕ್ಕೆ ಒಳಗಾದವರನ್ನು ದೂಷಿಸುವ ಬದಲು ಅವರಿಗೆ ಆತ್ಮಸ್ಥೈರ್ಯ ತುಂಬಿ, ವ್ಯಸನಮುಕ್ತ ಜೀವನ ನಡೆಸಲು ಪ್ರೋತ್ಸಾಹಿಸಬೇಕು ಎಂದರು.ಪಿಎಸ್‌ಐ ಖಾದರ್ ಭಾಷಾ ಮಾತನಾಡಿ, ಮದ್ಯಪಾನ ಮತ್ತು ಮಾದಕ ವಸ್ತುಗಳ ದುರ್ಬಳಕೆಯಿಂದ ವ್ಯಕ್ತಿಯ ಆರೋಗ್ಯದ ಜತೆಗೆ ಕುಟುಂಬದ ನೆಮ್ಮದಿ ಹಾಗೂ ಸಾಮಾಜಿಕ ಸಂಬಂಧಗಳ ಮೇಲೂ ಗಂಭೀರ ಪರಿಣಾಮ ಉಂಟಾಗುತ್ತದೆ. ದುಶ್ಚಟಗಳಿಂದ ದೂರವಿದ್ದು, ಕಾನೂನು ಪಾಲನೆ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಯುವಜನರು ದುಶ್ಚಟಗಳಿಗೆ ಬಲಿಯಾಗದಂತೆ ಪೋಷಕರು ಮತ್ತು ಸಮಾಜದ ಮುಖಂಡರು ಜಾಗೃತಿ ಮೂಡಿಸಬೇಕು ಎಂದರು.
ಚಂದ್ರಕಾಂತ ಮಾಸ್ತಿ ಗೌಡ ಹಾಗೂ ಲಕ್ಷ್ಮಣ ಸಂತೇಗುಳಿ ಅನಿಸಿಕೆ ಹಂಚಿಕೊಂಡರು. ಹಾಲಕ್ಕಿ ಒಕ್ಕಲಿಗ ಸಮುದಾಯ ಭವನದ ಅಧ್ಯಕ್ಷ ಗೋವಿಂದ ಗೌಡ, ದಿವಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಶಿವರಾಜ ಮೇಸ್ತ, ನಿಕಟಪೂರ್ವ ತಾಲೂಕಾಧ್ಯಕ್ಷ ಯೋಗಾನಂದ ಗಾಂಧಿ, ಸತೀಶ ಶೇಟ್ ಹಾಗೂ ಮಹೇಶ ನಾಯಕ, ಜನಜಾಗೃತಿ ವೇದಿಕೆಯ ಮಾಜಿ ಉಪಾಧ್ಯಕ್ಷ ವಾಸುದೇವ ನಾಯಕ ಇತರರು ವೇದಿಕೆಯಲ್ಲಿದ್ದರು.