ತುರ್ತು ಪರಿಸ್ಥಿತಿ ವೇಳೆ ಸಂವಹನಕ್ಕೆ ಸೈರನ್ ಅಳವಡಿಸಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : May 17, 2025, 01:29 AM IST
12ಕೆಡಿವಿಜಿ17-ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ. ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ ಇದ್ದರು. | Kannada Prabha

ಸಾರಾಂಶ

ರಾಷ್ಟ್ರೀಯ ಹಾಗೂ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನರ ಆಸ್ತಿಪಾಸ್ತಿ ನಷ್ಟ ತಡೆ ಹಾಗೂ ರಕ್ಷೆಗೆ ಅನುಕೂಲ ಆಗುವಂತೆ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತುರ್ತು ಸಂದರ್ಭದಲ್ಲಿ ಸಂವಹನಕ್ಕಾಗಿ ಸೈರನ್ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದ್ದಾರೆ.

- ಪಾಲಿಕೆ ವ್ಯಾಪ್ತಿಯಲ್ಲಿ 3 ಕಡೆ ಸೈರನ್ ವ್ಯವಸ್ಥೆ ಇರಬೇಕು । ಕನಿಷ್ಠ 50 ಕಿಮೀ ಅಂತರದಲ್ಲಿರಲಿ: ಗಂಗಾಧರ ಸ್ವಾಮಿ- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಷ್ಟ್ರೀಯ ಹಾಗೂ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನರ ಆಸ್ತಿಪಾಸ್ತಿ ನಷ್ಟ ತಡೆ ಹಾಗೂ ರಕ್ಷೆಗೆ ಅನುಕೂಲ ಆಗುವಂತೆ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತುರ್ತು ಸಂದರ್ಭದಲ್ಲಿ ಸಂವಹನಕ್ಕಾಗಿ ಸೈರನ್ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುರ್ತು ಪರಿಸ್ಥಿತಿ, ಪ್ರಕೃತಿ ವಿಪತ್ತುಗಳಿಂದಾಗುವ ಸಂದರ್ಭ ನಿಭಾಯಿಸಲು ಮತ್ತು ತುರ್ತಾಗಿ ಜನರಿಗೆ ಈ ಬಗ್ಗೆ ಮಾಹಿತಿ ತಲುಪಿಸಲು ಹಾಗೂ ಜಾಗೃತರಾಗಿಸಲು ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ಪಾಲಿಕೆ ವ್ಯಾಪ್ತಿಯಲ್ಲಿ 3 ಕಡೆ ಸೈರನ್ ಅಳವಡಿಸಬೇಕು. ಈ ಸೈರನ್‌ಗಳು ಕನಿಷ್ಠ 50 ಕಿಮೀ ಅಂತರದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ತಂಡಗಳನ್ನು ರಚಿಸಿ:

ಅಂತಹ ಪರಿಸ್ಥಿತಿಯಲ್ಲಿ ಜನರು ಗಾಬರಿ ಆಗದಂತೆ, ರಕ್ಷಣೆ ಪಡೆಯಲು ಸಲಹೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚಿಸಬೇಕು. ವಿಕೋಪದಲ್ಲಿ ಸಿಲುಕಿದಾಗ ರಕ್ಷಣಾತ್ಮಕ ಕ್ರಮಗಳ ಜೊತೆಗೆ ಜೀವಹಾನಿ ತಡೆಗೆ ಸನ್ನದ್ಧವಾಗಿರಬೇಕು. ಇದಕ್ಕಾಗಿ ಆಸ್ಪತ್ರೆಗಳಲ್ಲಿ ತುರ್ತು ನಿಗಾ ಘಟಕ, ವೈದ್ಯರ ತಂಡ, ರಕ್ಷಣಾತ್ಮಕ ಕ್ರಮಗಳ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳಲು 24/7 ಸಿದ್ಧವಾಗಿರುವಂತೆ ತಂಡಗಳನ್ನು ರಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಯೋಜನೆ ತಯಾರಿಸಿ ಎಂದು ಹೇಳಿದರು.

ಮುಂಗಾರು ಅನಾಹುತ ತಡೆಗೆ ಸನ್ನದ್ಧವಾಗಿ:

ಜೂನ್‍ನಿಂದ ಮುಂಗಾರು ಆರಂಭವಾಗಲಿದೆ. ಶಾಲಾ-ಕಾಲೇಜುಗಳೂ ಆರಂಭವಾಗಲಿವೆ. ಶಿಥಿಲ ಶಾಲಾ ಕೊಠಡಿಗಳ ದುರಸ್ತಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ತುಂಬಾ ಶಿಥಿಲವಾದ ಕೊಠಡಿಗಳನ್ನು ಗುರುತಿಸಿ, ರಿಪೇರಿಗೆ ಕ್ರಿಯಾಯೋಜನೆ ತಯಾರಿಸಿ, ಸಾಶಿಇ ಉಪನಿರ್ದೇಶಕರು ನೀಡಬೇಕು. ಜಿಲ್ಲೆಯ ಎಲ್ಲ ಶಾಲೆಗಳ ಸ್ಥಿತಿಗತಿ ಹಾಗೂ ಸುಸ್ಥಿತಿ ಬಗ್ಗೆ ಆಡಿಟ್ ವರದಿ ಪರಿಶೀಲಿಸಿ, ನೀಡಲು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದವರಿಗೆ ಆದೇಶಿಸಿದರು.

ಕೆರೆ, ಕಟ್ಟೆಗಳ ಪರಿಶೀಲಿಸಿ:

ದಾವಣಗೆರೆ ಜಿಲ್ಲೆಯ ಕೆರೆಗಳು ಮತ್ತು ಚೆಕ್‍ ಡ್ಯಾಂಗಳ ಸುಸ್ಥಿತಿ ಬಗ್ಗೆ, ರಸ್ತೆ, ಕಾಲುವೆಗಳ ಕಿರುಸೇತುವೆಗಳ ಪರಿಶೀಲನೆ ನಡೆಸಿ ಆಯಾ ಇಲಾಖೆಗಳು ವರದಿ ನೀಡಬೇಕು. ಸೇತುವೆ, ಕೆರೆಯ ಏರಿ ಸುಭದ್ರತೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮಾತನಾಡಿ, ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದ ಕೆರೆ ಏರಿಯ ದುರಸ್ತಿ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಭೆ ಗಮನಕ್ಕೆ ತಂದರು.

ಜಿಪಂ ಸಿಇಇ ಸುರೇಶ ಬಿ. ಇಟ್ನಾಳ್, ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ, ಉಪವಿಭಾಗಾಧಿಕಾರಿ ಸಂತೋಷ ಪಾಟೀಲ್, ಅಭಿಷೇಕ್, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

- - -

(ಬಾಕ್ಸ್‌) * ದಾಮಿನಿ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳಿ

ಪೂರ್ವ ಮುಂಗಾರು ಸಂದರ್ಭದಲ್ಲಿ ಸಿಡಿಲು ಬಡಿದು ಜನ ಮತ್ತು ಜಾನುವಾರು ಅಸುನೀಗುವುದನ್ನು ಕಾಣಲಾಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಸಿಡಿಲಿನ ಮುನ್ನೆಚ್ಚರಿಕೆ ಮಾಹಿತಿ ತಿಳಿದುಕೊಳ್ಳಲು ಮೊಬೈಲ್‍ನಲ್ಲಿ ಪ್ಲೇ ಸ್ಟೋರ್‌ನಿಂದ ಕೇಂದ್ರ ಸರ್ಕಾರದ ದಾಮಿನಿ ಆಪ್‌ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್‌ ಮಳೆ ಬರುವಾಗ ತಮ್ಮ ಸುತ್ತಮುತ್ತಲಿನಲ್ಲಿ ಸಿಡಿಲು ಅಪ್ಪಳಿಸುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಲಿದೆ. ಇದರಿಂದ ಕುರಿಗಾಯಿಗಳು ಜಾನುವಾರುಗಳ ರಕ್ಷಣೆ ಮತ್ತು ಜೀವ ರಕ್ಷಣೆ ಪಡೆದುಕೊಳ್ಳಬಹುದು ಎಂದು ಡಿಸಿ ತಿಳಿಸಿದರು.

- - -

-12ಕೆಡಿವಿಜಿ17:

ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಡಿಸಿ ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಿತು. ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಎಸ್‌ಪಿ ಉಮಾ ಪ್ರಶಾಂತ ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ