ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶಾಸಕ ಸಿದ್ದು ಸವದಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ೧೬ ದಿನಗಳಿಂದ ಜಲಾಶಯದಲ್ಲಿನ ನೀರು ಸೋರಿಕೆ ನಿಂತಿಲ್ಲ. ಇದಕ್ಕೆ ಯಾವೊಬ್ಬ ಸಚಿವರೂ ಸ್ಪಂದಿಸುತ್ತಿಲ್ಲ. ೨೩ ವರ್ಷಗಳಿಂದ ಅವೇ ಗೇಟ್‌ಗಳು, ಸರಿಯಾದ ನಿರ್ವಹಣೆಯೂ ಇಲ್ಲದೆ ತೇಪೆ ಹಚ್ಚುವ ಮೂಲಕ ಮುಕ್ತಾಯಗೊಳಿಸಿದರೆ ನೀರು ಸಂಗ್ರಹಣೆ ಸಾಧ್ಯವಾಗದು. ಮಹಾ ಸರ್ಕಾರದಿಂದ ನೀರು ಬಿಡಿಸಿದರೂ ಶಿಥಿಲವಾದ ಗೇಟ್‌ಗಳು ತಾಳುವ ಸ್ಥಿತಿಯಲ್ಲಿಲ್ಲ. ಹೊಸ ಗೇಟ್‌ಗಳನ್ನು ಅಳವಡಿಸಿ, ಕ್ರೇನ್ ದುರಸ್ತಿಗೊಳಿಸಿದ ಬಳಿಕ ನೀರು ಸಂಗ್ರಹಣೆ ಸಾಧ್ಯವಿದೆ. ತಕ್ಷಣ ಬೇಸಿಗೆಯೊಳಗೆ ಜಲಾಶಯದ ಎಲ್ಲ ಗೇಟ್ ಅಳವಡಿಸಿ, ಮುಂದಿನ ಮಳೆಗಾಲಕ್ಕಾದರೂ ನೀರು ಸಂಗ್ರಹಿಸಲು ಸಮರೋಪಾದಿಯಲ್ಲಿ ಕಾರ್ಯ ಮಾಡಬೇಕು. ಡ್ಯಾಂನ ಗುತ್ತಿಗೆ ನೌಕರರಿಗೆ ಕಳೆದ ೧೦ ತಿಂಗಳ ವೇತನ ಪಾವತಿಸಬೇಕು. ಡ್ಯಾಂ ನಿರ್ವಹಣೆಯನ್ನು ಅಥಣಿ ವಿಭಾಗದಿಂದ ಬೇರ್ಪಡಿಸಿ ಸ್ಥಳೀಯ ಅಭಿಯಂತರರಿಗೆ ವಹಿಸಬೇಕು. ಮೊದಲಿದ್ದ ೯ ತಾಂತ್ರಿಕ ಹುದ್ದೆ ಮರಳಿಸಬೇಕು. ಇಲ್ಲವಾದಲ್ಲಿ ಕೃಷ್ಣಾ ವ್ಯಾಪ್ತಿಯ ಪ್ರದೇಶದ ಮನೆಗೊಬ್ಬರಂತೆ ನಾಗರಿಕರು ಮತ್ತು ರೈತರೊಡನೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭಾನುವಾರದಿಂದ ರೈತರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದನ್ನು ಪ್ರಶ್ನಿಸಿದ ರೈತ ಸೋಮಲಿಂಗ ಪೂಜಾರಿ ನಮ್ಮ ಬೆಳೆಗಳಿಗೆ ಇದೀಗ ನೀರು ಅವಶ್ಯವಿದ್ದು, ಇದರಿಂದ ಕೋಟ್ಯಂತರ ಮೌಲ್ಯದ ಬೆಳೆ ಕಣ್ಣೆದುರೇ ನಾಶವಾಗುವಂತಾಗಿದೆ. ಬೇಕಾಬಿಟ್ಟಿ ಜಲಾಶಯದಿಂದ ನೀರು ಹೊರಬಿಡುವ ಅಧಿಕಾರಿಗಳ ಕ್ರಮದಿಂದ ಜಲಕ್ಷಾಮವಾಗುತ್ತಿದೆಯೆಂದು ದೂರಿದರು.ಜಮಖಂಡಿ ತಹಸೀಲ್ದಾರ ಹಾಗೂ ಅಥಣಿಯ ಎಡಬ್ಲುಇ ನಾಗರಾಳ ಮಾತನಾಡಿ, ನದಿ ನೀರು ತಕ್ಷಣ ಖಾಲಿಯಾಗದಿರಲು ಜಿಲ್ಲಾಧಿಕಾರಿಗಳ ಆದೇಶದನ್ವಯ ವಿದ್ಯುತ್ ಕಡಿತ ಮಾಡಿದ್ದು, ಜಲಾಶಯದ ಒಳಹರುವು ಪ್ರಮಾಣಕ್ಕನುಸಾರ ಹೊರಬಿಡುವ ಮತ್ತು ಸಂಗ್ರಹಿಸಲಾಗುತ್ತದೆಂದರು. ಉಭಯ ಶಾಸಕರು ಜಮಖಂಡಿ ತಹಸೀಲ್ದಾರ ಮೂಲಕ ಸಿಎಂ ಸಿದ್ಧರಾಮಯ್ಯಗೆ ಮನವಿ ಸಲ್ಲಿಸಿ, ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಇದಕ್ಕೆ ಸರ್ಕಾರ ಜಗ್ಗದಿದ್ದಲ್ಲಿ ಮುಂದಿನ ಹೋರಾಟ ಮತ್ತದರ ಪರಿಣಾಮಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.
ಈ ವೇಳೆ ರಬಕವಿ-ಬನಹಟ್ಟಿ, ಜಮಖಂಡಿ, ತೇರದಾಳ, ಮಹಾಲಿಂಗಪುರ ಪ್ರದೇಶಗಳ ಸಹಸ್ರಾರು ರೈತರು, ಡಾ.ಧನಪಾಲ ಯಲಟ್ಟಿ, ಪ್ರವೀಣ ನಾಡಗೌಡ, ಆನಂದ ಕಂಪು, ಶಂಕರ ಪಾಟೀಲ, ಪ್ರವೀಣ ನಾಡಗೌಡ, ಸತೀಶ ಹಜಾರೆ, ಭುಜಬಲಿ ವೆಂಕಟಾಪುರ, ಸುರೇಶ ಅಕ್ಕಿವಾಟ, ಶಿವಪ್ಪ ಬಾಗಲಕೋಟ, ಪರಪ್ಪ ಪಾಲಭಾಂವಿ, ಹನುಮಂತ ತೇಲಿ, ಶ್ರೀಶೈಲ ಬೀಳಗಿ, ಅಜಯ ಕಡಪಟ್ಟಿ, ಮಹಾದೇವ ಕೊಟ್ಯಾಳ, ಶೇಖರ ಅಂಗಡಿ, ಪ್ರವೀಣ ದಬಾಡಿ ಇತರರು ಇದ್ದರು.