ಕೊಪ್ಪಳ:
ರಸ್ತೆ ಸುರಕ್ಷತೆಗಾಗಿ ಬ್ಲ್ಯಾಕ್‌ಸ್ಪಾಟ್‌ಗಳು ಇರುವಲ್ಲಿ ಕ್ಯಾಮೆರಾ ಅಳವಡಿಸುವ ಜತೆಗೆ ಲೈಟಿಂಗ್ ವ್ಯವಸ್ಥೆ ಮಾಡಬೇಕು ಹಾಗೂ ಎಚ್ಚರಿಕೆ ಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್, ವಿವಿಧ ಇಲಾಖೆಗಳ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಕುರಿತು ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದಾಗ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುವ ಜನರ ಮೇಲೆ ಇಲ್ಲಿಯವರೆಗೆ ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ದಾಮೋದರ ಅವರಿಗೆ ಜಿಲ್ಲಾಧಿಕಾರಿ ಪ್ರಶ್ನಿಸಿದರು. ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಬೇಕು. ಅಪಘಾತ ಆದ ಸಂದರ್ಭದಲ್ಲಿ ಹೆಲ್ಮೆಟ್ ಜೀವ ಉಳಿಸುತ್ತದೆ ಎಂದು ಜನರಿಗೆ ತಿಳಿಸಿ ಎಂದರು.ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅವಶ್ಯಕತೆ ಇರುವಲ್ಲಿ ಸೈನ್ ಬೋರ್ಡ್, ಲೈಟಿಂಗ್ ವ್ಯವಸ್ಥೆಗಳನ್ನು ಮಾಡಬೇಕು. ಎಚ್ಚರಿಕೆ ಫಲಕ ಇರುವಲ್ಲಿ ಲೈಟಿಂಗ್ ವ್ಯವಸ್ಥೆ ಇರಬೇಕು. ಎಲ್ಲೆಲ್ಲಿ ರಸ್ತೆಉಬ್ಬು ನಿರ್ಮಿಸುವುದು ಆವಶ್ಯಕ ಎಂಬುದನ್ನು ಗುರುತಿಸಿ ಎಂದು ಹೇಳಿದರು.
ಹೆದ್ದಾರಿಗಳಲ್ಲಿ ಒಳ್ಳೆಯ ಗುಣಮಟ್ಟದ ಕ್ಯಾಮೆರಾ ಅಳವಡಿಸಬೇಕು. ವಾಹನಗಳ ನಂಬರ್ ಪ್ಲೇಟ್ ಮಾತ್ರವಲ್ಲದೆ ಅವುಗಳ ವೇಗ ಹಾಗೂ ವಾಹನ ಸವಾರರು ಸೀಟ್ ಬೆಲ್ಟ್ ಧರಿಸಿದ್ದಾರೆಯೇ ಎನ್ನುವುದು ಕುಳಿತಲ್ಲಿಂದಲೇ ನೋಡುವಷ್ಟು ಉತ್ತಮ ಕ್ಯಾಮೆರಾಗಳಿದ್ದು, ಅಂತವುಗಳನ್ನು ಅಳವಡಿಸಿ. ಕೆಕೆಆರ್‌ಟಿಸಿ ಬಸ್ ನಿಲ್ದಾಣಗಳಿಗಾಗಿ ಒಳ್ಳೆಯ ಸ್ಥಳಾವಕಾಶ ಇರುವ ಜಾಗಗಳನ್ನು ಗುರುತಿಸಿ ಹಾಗೂ ಅವು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇರಬೇಕು ಎಂದರು.ಕಳೆದ ಸಭೆಯಲ್ಲಿ ತಿಳಿಸಿದಂತೆ ಹುಲಗಿ ಬಸ್ ನಿಲ್ದಾಣದ ಪ್ರಸ್ತಾವನೆ ಕಳುಹಿಸಿದ್ದೀರಾ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಹಾದು ಹೋಗುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆಗಳು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸದಿದ್ದರೆ ಭಾರವಾದ ವಾಹನಗಳು ಸಂಚರಿಸಿದಲ್ಲಿ ಹಾಳಾಗಿ ಹೋಗುತ್ತವೆ. ಈ ಕುರಿತು ಸಂಬಂಧಿಸಿದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ನಗರ ವ್ಯಾಪ್ತಿಯಲ್ಲಿ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದರು.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪಿ. ಹೇಮಂತರಾಜ್, ಎನ್.ಎಚ್. 67 ಧಾರವಾಡದ ಟಕ್ನಿಕಲ್ ಮ್ಯಾನೇಜರ್ ಅಜಿಂಕೆ ನವಲೆ, ಎನ್.ಎಚ್. 50 ಹೊಸಪೇಟೆ ಸೈಟ್ ಎಂಜಿನಿಯರ್ ದಾನೇಶ, ಪ್ರೊಜೆಕ್ಟ್ ಡೈರೆಕ್ಟರ್ ಗಂಗಾಧರ, ಕೊಪ್ಪಳ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್ ಇತರರಿದ್ದರು.