ಕುರುಗೋಡು: ಇತ್ತೀಚೆಗೆ ಕಳ್ಳತನ, ದರೋಡೆ ಸೇರಿದಂತೆ ಇತರೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳ ಕಡಿವಾಣಕ್ಕೆ ಪಟ್ಟಣದ ಎಲ್ಲ ಅಂಗಡಿ- ಮು೦ಗಟ್ಟುಗಳ ಮಾಲೀಕರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕೆಂದು ಸಿಪಿಐ ವಿಶ್ವನಾಥ ಹಿರೇಗೌಡರ ಹೇಳಿದರು.
ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅಪರಾಧಗಳನ್ನು ತಪ್ಪಿಸಿ, ಇಲ್ಲದಿದ್ದರೆ ಸಿಸಿಟಿವಿ ಕ್ಯಾಮೆರಾ ಇಲ್ಲದ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಪಿಎಸ್ಐ ಸುಪ್ರೀತ್ ವಿರುಪಾಕ್ಷಪ್ಪ ಮಾತನಾಡಿ, ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ಸಾರ್ವಜನಿಕರು ಸಹ ಜಾಗೃತರಾಗಬೇಕು. ತಮ್ಮ ಓಣಿಯಲ್ಲಿ ಅಪರಿಚಿತ ವ್ಯಕ್ತಿ ಓಡಾಡಿದರೆ ಅಂಥಹ ವ್ಯಕ್ತಿ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿ, ಮುಂದಾಗಬಹುದಾದ ಅಪರಾಧಗಳನ್ನು ತಪ್ಪಿಸಿ ಎಂದು ಸಲಹೆ ನೀಡಿದರು.ಊರಿಗೆ ಹೋಗುವಾಗ ಮನೆಯ ಯಜಮಾನರು ತಮ್ಮ ಮನೆಯಲ್ಲಿನ ಆಭರಣಗಳನ್ನು ಬ್ಯಾಂಕ್‌ನಲ್ಲಿಟ್ಟು ಹೋಗಬೇಕು. ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಸೂಕ್ತ ಎಂದು ತಿಳಿಸಿದರು. ಗ್ರಾಮಗಳಲ್ಲಿ ಹಾಗೂ ಪಟ್ಟಣದಲ್ಲಿ ತಮ್ಮ ಮನೆ, ಓಣಿಗಳಲ್ಲಿ ಹೊಸ ವ್ಯಕ್ತಿಗಳು ಓಡಾಡುವುದು ಗಮನಿಸುತ್ತಿರಬೇಕು. ಜೊತೆಗೆ ಅಪರಿಚಿತ ವ್ಯಕ್ತಿಗಳ ಬಗ್ಗೆ ಅನುಮಾನ ವ್ಯಕ್ತವಾದಲ್ಲಿ ಹತ್ತಿರದ ಠಾಣೆಯ ಗಮನಕ್ಕೆ ತರಬೇಕು ಎಂದರು.
ಕುರುಗೋಡು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕಳ್ಳತನ ಅಪರಾಧ ತಡೆ ಮುಂಜಾಗೃತ ಸಭೆ ಜರುಗಿತು.