ಮೂರು ದಿನದೊಳಗೆ ಫಲಕ, ಮಹಾದ್ವಾರ ಅಳವಡಿಸಿ: ತುಳಸಿರಾಮ್

KannadaprabhaNewsNetwork |  
Published : Mar 13, 2024, 02:04 AM IST
12ಕೆಡಿವಿಜಿ62-ದಾವಣಗೆರೆಯಲ್ಲಿ ಮಂಗಳವಾರ ನಾಯಕ ಸಮಾಜದ ರಾಜ್ಯ ಮುಖಂಡ ಬೆಂಗಳೂರಿನ ಟಿ.ಆರ್.ತುಳಸೀರಾಮ್, ಹರಿಹರದ ಜಿಗಳಿ ರಂಗಪ್ಪ, ಭಾನುವಳ್ಳಿ ಗ್ರಾಪಂ ಸದಸ್ಯ ಧನ್ಯಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

1999ರಲ್ಲಿ ಆಗಿನ ಶಾಸಕರು, ಮುಖಂಡರು ಗ್ರಾಪಂನಲ್ಲಿ ಠರಾವು ಮಾಡಿ, ನಿರ್ಮಿಸಿದ್ದ ವೀರ ಮದಕರಿ ನಾಯಕ ಮಹಾದ್ವಾರ, ಶಿಲಾ ಫಲಕ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತದ ನಾಮಫಲಕವನ್ನು ಭಾನುವಳ್ಳಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ತೆರವುಗೊಳಿಸುವ ಜೊತೆಗೆ 30ಕ್ಕೂ ಹೆಚ್ಚು ವಾಲ್ಮೀಕಿ ಸಮಾಜದ ಮಹಿಳೆಯರು, ಪುರುಷರನ್ನು ಬಂಧಿಸಿದ್ದು ಅಕ್ಷಮ್ಯ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ತಾಲೂಕು ಭಾನುವಳ್ಳಿ ಗ್ರಾಮದಲ್ಲಿ ವೀರ ಮದಕರಿ ನಾಯಕರ ಮಹಾದ್ವಾರ, ಮಹರ್ಷಿ ವಾಲ್ಮೀಕಿ ವೃತ್ತದ ನಾಮಫಲಕ ಹಾಗೂ ಶಿಲಾ ಫಲಕ ತೆರವುಗೊಳಿಸಿದ ಜಿಲ್ಲಾಡಳಿತ ಇನ್ನು 3 ದಿನದೊಳಗೆ ಮತ್ತೆ ಅವುಗಳ ಅಳವಡಿಸದಿದ್ದರೆ ತೀವ್ರ ಪ್ರತಿಭಟನೆ ಜೊತೆಗೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌ ಸೇರಿ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳು ಎಚ್ಚರಿಸಿವೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹರ್ಷಿ ವಾಲ್ಮೀಕಿ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಬೆಂಗಳೂರಿನ ಟಿ.ಆರ್.ತುಳಸಿರಾಮ್, 1999ರಲ್ಲಿ ಆಗಿನ ಶಾಸಕರು, ಮುಖಂಡರು ಗ್ರಾಪಂನಲ್ಲಿ ಠರಾವು ಮಾಡಿ, ನಿರ್ಮಿಸಿದ್ದ ವೀರ ಮದಕರಿ ನಾಯಕ ಮಹಾದ್ವಾರ, ಶಿಲಾ ಫಲಕ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತದ ನಾಮಫಲಕವನ್ನು ಭಾನುವಳ್ಳಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ತೆರವುಗೊಳಿಸುವ ಜೊತೆಗೆ 30ಕ್ಕೂ ಹೆಚ್ಚು ವಾಲ್ಮೀಕಿ ಸಮಾಜದ ಮಹಿಳೆಯರು, ಪುರುಷರನ್ನು ಬಂಧಿಸಿದ್ದು ಅಕ್ಷಮ್ಯ ಎಂದರು.

ಜಿಪಂ, ಸರ್ಕಾರದಿಂದ ಮಹಾದ್ವಾರ, ವೃತ್ತಕ್ಕೆ ಅನುದಾನ ಬಿಡುಗಡೆಯಾಗಿದೆ. ಸರ್ಕಾರಿ ದಾಖಲೆಗಳಲ್ಲೂ ಮದಕರಿ ನಾಯಕ ಮಹಾದ್ವಾರ, ಮಹರ್ಷಿ ವೃತ್ತವೆಂಬ ಉಲ್ಲೇಖ ಇದೆ. ಜಿಲ್ಲಾಧಿಕಾರಿ, ಸತ್ಯ ಶೋಧನಾ ಸಮಿತಿಯ ಉಪ ವಿಭಾಗಾಧಿಕಾರಿ, ಹರಿಹರ ತಹಸೀಲ್ದಾರ್‌ಗೆ ಸರ್ಕಾರಿ ದಾಖಲೆ ಪರಿಶೀಲಿಸುವ ವ್ಯವದಾನ ಇಲ್ಲವೇ? ಗ್ರಾಮಸ್ಥರಿಗೆ ಮಾ.11ರವರೆಗೆ ದಾಖಲೆ ನೀಡಲು ಕಾಲಾವಕಾಶ ನೀಡಿ, ಅದೇ ದಿನ ಬೆಳಿಗ್ಗೆಯೇ ನಿಷೇಧಾಜ್ಞೆ ಮೂಲಕ ಮಹಾದ್ವಾರ, ಫಲಕಗಳ ತೆರವುಗೊಳಿಸಿದ್ದು ಏಕೆ? ಶೀಘ್ರವೇ ಬೆಂಗಳೂರಿನಲ್ಲಿ ಎಸ್ಟಿ ಸಮುದಾಯ ಸಿಎಂ ಮನೆಗೆ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಸಿದರು.

ಶ್ರೀಗಳ ಸಭೆ ನಡೆಸಿಲ್ಲವೇಕೆ?:

ಭಾನುವಳ್ಳಿ ಗ್ರಾಪಂ ಸದಸ್ಯ ಧನ್ಯಕುಮಾರ, ಸಮಾಜದ ಹರಿಹರ ಅಧ್ಯಕ್ಷ ಜಿಗಳಿ ರಂಗಣ್ಣ ಮಾತನಾಡಿ, ನಮಗೆ ಮದಕರಿ ನಾಯಕರು ಬೇರೆಯಲ್ಲ, ಸಂಗೊಳ್ಳಿ ರಾಯಣ್ಣ ಬೇರೆಯಲ್ಲ. ಎಲ್ಲ ಮಹನೀಯರ ಬಗ್ಗೆ ನಮಗೆ ಅಭಿಮಾನ, ಗೌರವವಿದೆ. ಗ್ರಾಮದಲ್ಲಿ ಸಾಮರಸ್ಯ, ಸೋದರತ್ವ ಇರಲೆಂದು ಬಯಸುವವರು ನಾವು. ಆದರೆ, ಕೆಲವರ ಚಿತಾವಣೆಯಿಂದಾಗಿ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದೆಲ್ಲಾ ಆಗಿದೆ. ರಾಜನಹಳ್ಳಿ-ಕಾಗಿನೆಲೆ ಶ್ರೀಗಳ ಸಭೆ ಮಾಡಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತ ಯಾಕೆ ಅದನ್ನು ಮಾಡಲಿಲ್ಲ? ಎಸ್ಟಿ ಸಮುದಾಯದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದು ಏಕೆ? ಈ ಬಗ್ಗೆ 27 ಜನರ ವಿರುದ್ಧ ಜಾತಿ ನಿಂದನೆ, ದೌರ್ಜನ್ಯ ಪ್ರಕರಣದಡಿ ದೂರು ದಾಖಲಿಸಿದ್ದೇವೆ ಎಂದರು.

ಸಮಾಜದ ಮುಖಂಡರಾದ ಮಲ್ಲಾಪುರ ದೇವರಾಜ, ಧನ್ಯಕುಮಾರ್, ಬೇವಿನಹಳ್ಳಿ ಮಹೇಶ, ಎ.ಸಿ.ನಾಗರಾಜ, ಕೆ.ಆರ್.ರಂಗಪ್ಪ, ಚನ್ನಬಸಪ್ಪ, ರಂಗನಾಥ, ಎಂ.ನಿಜಲಿಂಗಪ್ಪ ಜಗಳೂರು ಇತರರಿದ್ದರು.

ಸಮಸ್ಯೆ ತಕ್ಷಣ ಪರಿಹರಿಸಿ

ಭಾನುವಳ್ಳಿ ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಗಮನಕ್ಕೆ ತರುತ್ತೇವೆ. ಆಗಿರುವ ಸಮಸ್ಯೆ ತಕ್ಷಣ ಪರಿಹರಿಸಬೇಕು. ಇಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿ ನಾಯಕ ಸಮುದಾಯದ ಶಕ್ತಿ ಏನೆಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಆ ಚುನಾವಣೆಯಲ್ಲಿ ನಾವು ತೋರಿಸುತ್ತೇವೆ. ಈ ಪ್ರಕರಣ ನಾವು ಇಲ್ಲಿಗೆ ಕೈಬಿಡುವುದಿಲ್ಲ. ಡಿಸಿ ಕಚೇರಿ, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಜೊತೆಗೆ ನ್ಯಾಯಾಲಯದಲ್ಲೂ ಡಿಸಿ, ಎಸಿ, ತಹಸೀಲ್ಗಾರ್, ಗ್ರಾಪಂ ಪಿಡಿಒ, ಕಾರ್ಯದರ್ಶಿ ಕ್ರಮದ ಬಗ್ಗೆ ಪ್ರಶ್ನಿಸಿ, ತಕ್ಕ ಪಾಠ ಕಲಿಸುತ್ತೇವೆ.

ಟಿ.ಆರ್.ತುಳಸೀರಾಮ್, ಎಸ್ಟಿ ಸಮುದಾಯದ ರಾಜ್ಯ ಮುಖಂಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ