ಸೋಲಾರ್ ವಿದ್ಯುತ್ ಸ್ಥಾವರ ಅಳವಡಿಸಿಕೊಳ್ಳಿ: ಶಾಸಕ ನೇಮರಾಜ್ ನಾಯ್ಕ

KannadaprabhaNewsNetwork |  
Published : Jul 07, 2026, 02:30 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ಚರಂಡಿ ಸಹಿತ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ನೇಮರಾಜ್ ನಾಯ್ಕ ಸೋಮವಾರ ಚಾಲನೆ ನೀಡಿದರು. | Kannada Prabha

ಸಾರಾಂಶ

ರೈತರು ಕೃಷಿ ಚಟುವಟಿಕೆಗಳಿಗೆ ವಿದ್ಯುತ್‌ಗಾಗಿ ಸರ್ಕಾರದ ಮೇಲೆ ಅವಲಂಬಿತರಾಗುವುದು ಬೇಡ.

ಹಗರಿಬೊಮ್ಮನಹಳ್ಳಿ: ಈ ಹಿಂದೆ ೨೦೦೮ರಲ್ಲಿ ನಾನು ಆಡಳಿತಾರೂಢ ಬಿಜೆಪಿ ಶಾಸಕನಾಗಿದ್ದಾಗ ರೈತರಿಂದ ಯಾವುದೇ ದಾಖಲೆ ಪಡೆಯದೇ ಐದು ವರ್ಷಗಳಲ್ಲಿ ೩೦೦೦ ಗಂಗಾ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಗಂಗಾ ಕಲ್ಯಾಣ ಯೋಜನೆ ಜಾರಿಗೆ ರೈತರು ಒಂದು ವರ್ಷ ಕಾಯಬೇಕಾಗುತ್ತದೆ. ರೈತರು ಸಂಕಷ್ಟದಲ್ಲಿದ್ದಾರೆ ಎಂದು ಶಾಸಕ ನೇಮರಾಜ್ ನಾಯ್ಕ ನಿಟ್ಟುಸಿರುಬಿಟ್ಟರು.ತಾಲೂಕಿನ ಹನಸಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ ₹೬೦.೩೯ಲಕ್ಷ ಅನುದಾನದ ಚರಂಡಿ ಸಹಿತ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ, ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ರೈತರು ಕೃಷಿ ಚಟುವಟಿಕೆಗಳಿಗೆ ವಿದ್ಯುತ್‌ಗಾಗಿ ಸರ್ಕಾರದ ಮೇಲೆ ಅವಲಂಬಿತರಾಗುವುದು ಬೇಡ. ವಿದ್ಯುತ್ ಸ್ವಾವಲಂಬನೆಯ ನಿಟ್ಟಿನಲ್ಲಿ ರೈತರು ತಮ್ಮ ತಮ್ಮ ಮನೆಗಳು, ಹೊಲಗಳ ಬದುವುಗಳ ಮೇಲೆ ಸೋಲಾರ್ ವಿದ್ಯುತ್ ಸ್ಥಾವರಗಳ ಅಳವಡಿಕೆ ಮಾಡಿಕೊಳ್ಳುವುದು ಸೂಕ್ತ. ರೈತರೇ ವಿದ್ಯುತ್ ಉತ್ಪಾದಿಸಿ ಸರ್ಕಾರಕ್ಕೆ ವಿಕ್ರಯಿಸಿಬಹುದು. ಸರ್ಕಾರದ ಸಬ್ಸಿಡಿ ಮತ್ತು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯದ ಅವಕಾಶವಿದೆ. ಯೋಜನೆಯ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಹನಸಿ ಗ್ರಾಮಕ್ಕೆ ಅಕ್ಕ ಪಕ್ಕದ ಗ್ರಾಮಗಳ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ಡಾಂಬರೀಕರಣಕ್ಕೆ ಅನುದಾನ ನೀಡಲಾಗುತ್ತದೆ. ನಿವೇಶನ ಒದಗಿಸಿ ₹೧೦ಲಕ್ಷ ಅನುದಾನದ ಕ್ರಿಯಾಯೋಜನೆ ರೂಪಿಸಿ ಗ್ರಾಮದಲ್ಲಿ ಗಂಗಾದೇವಿಯ ದೇಗುಲಕ್ಕೆ ಭೂಮಿಪೂಜೆ ಮಾಡಲಾಗುತ್ತದೆ. ಗ್ರಾಮದ ಜನತೆಯ ಎಲ್ಲ ಬೇಡಿಕೆಗಳನ್ನು ಎರಡೇ ವರ್ಷಗಳಲ್ಲಿ ಹಂತ ಹಂತವಾಗಿ ನೆರವೇರಿಸಿ ೨೦೨೮ರಲ್ಲಿ ನಿಮ್ಮ ಗ್ರಾಮಕ್ಕೆ ಮತ ಯಾಚಿಸಲು ಬರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಗ್ರಾಮದ ರೈತ ರಜಾಕ್ ಎಂಬವರು ಸೇರಿದಂತೆ ಮತ್ತಿತರರು ಹಿಂದಿನ ಶಾಸಕ ಭೀಮಾನಾಯ್ಕ ಅವರ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆ ಸ್ಥಗಿತಗೊಂಡಿರುವ ಕುರಿತು ಶಾಸಕರ ಗಮನ ಸೆಳೆದರು. ಗ್ರಾಮದ ಸ.ಹಿ.ಪ್ರಾಥಮಿಕ ಶಾಲೆಗೆ ಸೌಲಭ್ಯಗಳನ್ನು ಕಲ್ಪಿಸುವಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ಗ್ರಾಮದಲ್ಲಿನ ದೇಗುಲಗಳ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿ.ಎಚ್. ಸಿದ್ದರಾಜು, ಮುಖಂಡರಾದ ಹನಸಿ ಸಿದ್ದೇಶ್, ಕೆ.ಬಸವರಾಜಪ್ಪ, ಕದಿರೆಪ್ಪನವರ ಪ್ರಕಾಶ್, ಮಾಸ್ತಳ್ಳಿ ಕೊಟ್ರೇಶಪ್ಪ, ತಳವಾರ್ ಪರಶುರಾಮ್, ಜಿ.ಹನಮಂತಪ್ಪ, ಕೆ.ಸಣ್ಣನಾರಪ್ಪ, ಶಿವಗಂಗಮ್ಮ, ಸಿ.ಎಂ.ಸಣ್ಣವೀರಯ್ಯ, ಎಚ್.ಗೋಣೆಪ್ಪ, ಜೆ.ಈಶಪ್ಪ, ಹಾಗೂ ಗುತ್ತಿಗೆದಾರ ಕುಮಾರ ನಾಯ್ಕ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಭಯ ಗುರುಗಳು ಅದ್ಭುತ ರತ್ನಗಳು: ಮಲ್ಲಿಕಾರ್ಜುನ ಶ್ರೀ
ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ಸಿಗಲಿ: ಕಲ್ಲಯ್ಯಜ್ಜನವರು