ಗದಗ: ಗ್ರಾಮೀಣ ಸೊಗಡಿನ ಪರಂಪರೆಯಾದ ಕುಸ್ತಿ ಕಲೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಅತ್ಯುತ್ತಮ ಕ್ರೀಡೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ತಿಳಿಸಿದರು.
ಸೋಮವಾರ ಸಂಜೆ ವೀರೇಶ್ವರ ಪುಣ್ಯಾಶ್ರಮದ ಸಮೀಪದ ಕುಸ್ತಿ ಮೈದಾನದಲ್ಲಿ ಪಂಚಾಕ್ಷರಿ ಗವಾಯಿಗಳವರ ಹಾಗೂ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಗದಗ-ಬೆಟಗೇರಿ ಜನರಲ್ ವರ್ಕರ್ಸ್ ಹಮಾಲರು ಹಾಗೂ ಚಕ್ಕಡಿಯವರ ಸಮಿತಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಗೆ ಇಬ್ಬರು ಕುಸ್ತಿಪಟುಗಳನ್ನು ಕಣಕ್ಕಿಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಕುಸ್ತಿ ಕೇವಲ ಕ್ರೀಡೆಯಲ್ಲ, ಶಿಸ್ತು, ಧೈರ್ಯ, ದೈಹಿಕ ಸದೃಢತೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಮಹತ್ವದ ಪರಂಪರೆಯಾಗಿದೆ. ಇಂತಹ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಮೂಲಕ ಯುವಜನರಲ್ಲಿ ಆರೋಗ್ಯಕರ ಬದುಕಿನ ಬಗ್ಗೆ ಅರಿವು ಮೂಡಿಸಬಹುದು. ಸಮಿತಿ ಪ್ರತಿವರ್ಷ ಈ ಪಂದ್ಯಾವಳಿಯನ್ನು ಏರ್ಪಡಿಸುತ್ತ ಬಂದಿರುವುದು ಅಭಿನಂದನೀಯ ಎಂದರು.
ಸಮಿತಿಯ ಅಧ್ಯಕ್ಷ ಆದಪ್ಪ ಮಾರೆಪ್ಪನವರ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಪಂದ್ಯಾವಳಿಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು, ಗದಗ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಹೆಸರಾಂತ ಕುಸ್ತಿಪಟುಗಳು ಭಾಗವಹಿಸಿರುವುದು ವಿಶೇಷ ಎಂದರು.ಪಂದ್ಯಾವಳಿಯ ಯಶಸ್ವಿಗಾಗಿ ಸಮಿತಿಯ ಅಧ್ಯಕ್ಷ ಆದಪ್ಪ ಮಾರೆಪ್ಪನವರ, ಉಪಾಧ್ಯಕ್ಷ ಮಕ್ತುಂಸಾಬ ನಾಗನೂರ, ಕಾರ್ಯದರ್ಶಿ ಇಮಾಮಸಾಬ ರೋಣದ, ಖಜಾಂಚಿ ಶಂಕ್ರಪ್ಪ ಯರಗುಡಿ, ಕರ್ನಾಟಕ ರಾಜ್ಯ ಹಮಾಲರ ಒಕ್ಕೂಟದ ರಾಜ್ಯ ಅಧ್ಯಕ್ಷ ಅಯ್ಯಪ್ಪ ನಾಯ್ಕರ್ ಸೇರಿದಂತೆ ಮಮ್ಮುಸಾಬ ವಾಲೀಕಾರ, ಇಮಾಮಹುಸೇನ ರೋಣದ, ರಾಜೇಸಾಬ ಕಣವಿ ಮಾರ್ಗದರ್ಶನ ನೀಡಿದರು.
ಗೋವಿಂದಪ್ಪ ಮುಂಡರಗಿ, ದೇವರಾಜ ಬಿನ್ನಾಳ, ಹುಸೇನಸಾಬ ವಡವಿ, ಬಸವರಾಜ ಸೂಡಿ, ಫಕ್ರುಸಾಬ ಘಟ್ಟದ, ಯಲ್ಲಪ್ಪ ಬೇವಿನಮರದ, ರಾಮಣ್ಣ ವಾಲ್ಮೀಕಿ, ಜಹಾಂಗೀರಸಾಬ ಲಕ್ಷ್ಮೇಶ್ವರ, ಶ್ರೀಕಾಂತ ಸಿಂಗಾಡಿ, ನಾಗಪ್ಪ ಕೊರ್ಲಹಳ್ಳಿ, ಶೇಖಪ್ಪ ವಾಲ್ಮೀಕಿ, ರವಿ ಚಲವಾದಿ, ಮಾರುತಿ ರಾಯಲದೊಡ್ಡಿ, ಸುಭಾಸ ಶೆಗಣಿ ಹಾಗೂ ರಾಘು ಮುಗಳಿ ಪಂದ್ಯಾವಳಿಯ ಯಶಸ್ಸಿಗೆ ಶ್ರಮಿಸಿದರು.
ಹಿರಿಯ ಅನುಭವಿ ಪೈಲ್ವಾನರು ಹಾಗೂ ನಿರ್ಣಾಯಕರ ಮಾರ್ಗದರ್ಶನದಲ್ಲಿ ಪಂದ್ಯಗಳು ಶಿಸ್ತಿನಿಂದ ನಡೆದವು. ಜಾತ್ರೆಗೆ ಆಗಮಿಸಿದ್ದ ಭಕ್ತರು ಹಾಗೂ ಕುಸ್ತಿಪ್ರೇಮಿಗಳು ಪಂದ್ಯಾವಳಿಯನ್ನು ಆಸಕ್ತಿಯಿಂದ ವೀಕ್ಷಿಸಿದರು.