ಹಾವೇರಿ: ಹಾವೇರಿ ಜಿಲ್ಲೆಯ ಸಹಕಾರಿ ರಂಗದ ಬಹುಕಾಲದ ಕನಸಾಗಿರುವ ಸ್ವತಂತ್ರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ಶೀಘ್ರದಲ್ಲೇ ಸಾಕಾರವಾಗಲಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ 5 ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯದೊಂದಿಗೆ ನಗರದ ರೈಲ್ವೆ ಸ್ಟೇಶನ್ ರಸ್ತೆಯಲ್ಲಿರುವ ಜಿಲ್ಲಾ ಸಹಕಾರಿ ಯೂನಿಯನ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಹಿಂದೆ ಆರ್‌ಬಿಐ ಮತ್ತು ನಬಾರ್ಡನ ತಾಂತ್ರಿಕ ಕಾರಣಗಳಿಂದ ಈ ಯೋಜನೆ ಸಾಧ್ಯವಾಗಿರಲಿಲ್ಲ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಜಾರಿಗೆ ತಂದ ಹೊಸ ನೀತಿಯಂತೆ ದೇಶದ ಪ್ರತಿ ಜಿಲ್ಲೆಗೂ ಸಹಕಾರಿ ಬ್ಯಾಂಕ್ ಸ್ಥಾಪನೆಗೆ ಅವಕಾಶ ದೊರೆತಿದ್ದು, ಹಾವೇರಿ ಜಿಲ್ಲೆಗೂ ಇದರಿಂದ ಅನುಕೂಲವಾಗಿದೆ. ಧಾರವಾಡ ಡಿಸಿಸಿ ಬ್ಯಾಂಕ್ ಹಾವೇರಿ ಪ್ರತ್ಯೇಕತೆಗೆ ಸಂಬಂಧಿಸಿದಂತೆ ಅನುಮೋದನಾ ಠರಾವು ಅಂಗೀಕರಿಸಿದ್ದು, ಅಗತ್ಯ ದಾಖಲೆಗಳನ್ನು ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಲಾಗಿದೆ. ಸರ್ಕಾರದ ಮೂಲಕ ಪ್ರಸ್ತಾವನೆ ನಬಾರ್ಡ್‌ಗೆ ಕಳುಹಿಸಿದ ಬಳಿಕ ಆರ್‌ಬಿಐ ಅನುಮೋದನೆ ಸೇರಿದಂತೆ ಪ್ರಕ್ರಿಯೆ ಪೂರ್ಣಗೊಳ್ಳಲು ಐದರಿಂದ ಆರು ತಿಂಗಳು ಬೇಕಾಗಬಹುದು. ಸ್ವತಂತ್ರ ಡಿಸಿಸಿ ಬ್ಯಾಂಕ್ ಸ್ಥಾಪನೆಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ರೈತರಿಗೆ ಹೆಚ್ಚಿನ ಆರ್ಥಿಕ ಬಲ ದೊರೆಯಲಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಹತ್ತಾರು ಬ್ಯಾಂಕುಗಳು, ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಲು ಬೇಕಾದ ಸೂಕ್ತ ಕಾರ್ಯಕ್ರಮಗಳನ್ನು ನಾವು ರೂಪಿಸಬೇಕಿದೆ. ಇದನ್ನು ಕೇವಲ ಒಂದು ಯೋಜನೆಯನ್ನಾಗಿ ನೋಡದೆ, ಒಂದು ಚಳವಳಿ ರೂಪದಲ್ಲಿ ಪ್ರಾರಂಭಿಸಬೇಕು ಎಂದರು.ಕೇವಲ ಡಿಸಿಸಿ ಬ್ಯಾಂಕ್ ಅಥವಾ ಸರ್ಕಾರದ ಧನಸಹಾಯದ ಕಡೆಗೆ ಮುಖ ಮಾಡದೆ, ಸಹಕಾರ ರಂಗದ ಸ್ವಂತ ಸಾಮರ್ಥ್ಯದ ಮೇಲೆ ರೈತರಿಗೆ ಸಾಲ ಹಾಗೂ ಇತರ ನೆರವು ನೀಡುವಂತಾಗಬೇಕು. ಇದರೊಂದಿಗೆ ಸಾಲದ ಸಮರ್ಪಕ ಮರುಪಾವತಿ ಕಡೆಗೂ ಸಂಸ್ಥೆಗಳು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಸವರಾಜ ಅರಬಗೊಂಡ ಅವರು, ಜಿಲ್ಲೆಗೆ ಅವಶ್ಯವಿರುವ ಜಿಲ್ಲಾ ಸಹಕಾರ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರ ಭವನ ನಿರ್ಮಾಣ ಮಾಡಲು ಮನವಿ ಮಾಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಅವರು, ಕೇಂದ್ರ ಸರ್ಕಾರ ಉದ್ದೇಶಿಸಿರುವ ಈ ಸಹಕಾರ ಸಪ್ತಾಹದ ಉದ್ದೇಶಗಳನ್ನು ಗ್ರಾಮೀಣ ಮಟ್ಟದಲ್ಲಿ ಯಶಸ್ವಿಯಾಗಿ ನೆರವೇರಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಧಾರವಾಡ ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಯೂನಿಯನ್ ಉಪಾಧ್ಯಕ್ಷ ಲಿಂಗನಗೌಡ ಹಳ್ಳಪ್ಪಗೌಡ್ರ, ನಿರ್ದೇಶಕರಾದ ಶಿವಾನಂದ ರಾಮಗೇರಿ, ಶಿವಾನಂದ ಸಂಗಾಪುರ, ಬಸವೇಶಗೌಡ ಪಾಟೀಲ, ಮಲ್ಲಿಕಾರ್ಜುನ ಸಾತೇನಹಳ್ಳಿ, ಏಕೇಶಪ್ಪ ಬಣಕಾರ, ಬಸನಗೌಡ ಪಾಟೀಲ, ವೀರಭದ್ರಪ್ಪ ಉಪ್ಪಿನ, ನಿಸ್ಸೀಮಗೌಡ ಪಾಟೀಲ, ಚಂದ್ರಶೇಖರ ಛತ್ರದ, ನೀಲವ್ವ ಮುದಿಗೌಡ್ರ, ಮೃತ್ಯುಂಜಯ ಯಲಿಗಾರ, ಹಾವೇರಿ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ವಿಕ್ರಮ್ ಕುಲಕರ್ಣಿ ಸೇರಿದಂತೆ ಸಹಕಾರ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಜಿಲ್ಲೆಯ ಸಹಕಾರಿ ಸಂಘಗಳ ಅಕಾರಿ ಸಿಬ್ಬಂದಿಗಳು ಹಾಜರಿದ್ದರು. ಯೂನಿಯನ್ ಸಿಇಒ ಸವಿತಾ ಹಿರೇಮಠ ನಿರ್ವಹಿಸಿದರು.