ಸವಣೂರು: ಬಿ.ಎಲ್.ಒ.ಗಳು ಪ್ರತಿ ಮನೆ ಮನೆಗೆ ಭೇಟಿ ನೀಡುವುದರಿಂದ ಅವರಿಗೆ ಸಾರ್ವಜನಿಕರು ಸಂಪೂರ್ಣ ಮಾಹಿತಿ ನೀಡಬೇಕೆಂದು ಸೂಚಿಸಿದರು. ಮತದಾನದ ಹಕ್ಕು ಕಡ್ಡಾಯವಾಗಿದ್ದು, ಈ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ತಾಪಂ ಇಓ ಬಿ.ಎಸ್. ಶಿಡೇನೂರ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್)-2026 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ ಯಲವಿಗಿ, ಹೂವಿನಶಿಗ್ಲಿ, ಕಡಕೋಳ, ಹತ್ತಿಮತ್ತೂರು, ತೊಂಡೂರು ಹಾಗೂ ಹುರಳಿಕುಪ್ಪಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿಶೇಷ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ತಾಲೂಕಿನ 21 ಗ್ರಾಮ ಪಂಚಾಯತಿಗಳ ಹಾಗೂ ತಾಲೂಕು ಪಂಚಾಯಿತಿಯ ಎಲ್ಲಾ ಸಿಬ್ಬಂದಿಗಳು ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್. ಶಿಡೇನೂರ ಹಾಗೂ ತಹಸೀಲ್ದಾರ ರವಿಕುಮಾರ ಕೊರವರ ರ‍್ಯಾಲಿಗೆ ಚಾಲನೆ ನೀಡಿದರು. ತಾಲೂಕಿನ ಯಾವುದೇ ಒಬ್ಬ ವ್ಯಕ್ತಿಯೂ ಇದರಿಂದ ಹೊರಗುಳಿಯಬಾರದು ಎಂದು ಅವರು ಹೇಳಿದರು. 18 ವರ್ಷ ಮೇಲ್ಪಟ್ಟ ಎಲ್ಲಾ ಯುವಕ-ಯುವತಿಯರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದಲ್ಲಿ ಕಡ್ಡಾಯವಾಗಿ ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಮಟ್ಟ ಹಾಗೂ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮತದಾರರ ಸೌಲಭ್ಯ ಕೇಂದ್ರಗಳನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತೆರೆಯಲಾಗಿದೆ ಎಂದರು. ಅಲ್ಲದೆ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳೊಂದಿಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಗುವುದು ಎಂದರು70ಕ್ಕೂ ಹೆಚ್ಚು ಬೈಕ್‌ಗಳು ಹಾಗೂ ವಿಶೇಷ ವಾಹನದ ಧ್ವನಿವರ್ಧಕಗಳ ಮೂಲಕ ಆರು ಗ್ರಾಮ ಪಂಚಾಯತಿಗಳ ಎಲ್ಲಾ ಗ್ರಾಮಗಳಲ್ಲಿ ಪ್ರಚಾರ ನಡೆಸಿ, ಎಸ್‌ಐಆರ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.