ಬಳ್ಳಾರಿ: ರಾಜ್ಯಾದ್ಯಂತ ಸಮೃದ್ಧ ಮಳೆಯಾಗಿ ರೈತರು ಉತ್ತಮ ಬೆಳೆ ಬೆಳೆಯುವಂತಾಗಲಿ ಎಂದು ನಗರದ ಕನಕದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಸೋಮವಾರ ವಿಶೇಷ ಪೂಜೆ ಹಾಗೂ ವರುಣಯಾಗವನ್ನು ನೆರವೇರಿಸಲಾಯಿತು.

ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಗಾದೆಪ್ಪ ದಂಪತಿ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವೇದ ಪಂಡಿತರು ವೈದಿಕ ವಿಧಿ ವಿಧಾನಗಳೊಂದಿಗೆ ವರುಣ ದೇವರಿಗೆ ವಿಶೇಷ ಹೋಮ-ಹವನಗಳನ್ನು ನಡೆಸಿದರು. ರಾಜ್ಯ ಹಾಗೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು, ಜಲಾಶಯಗಳು ಭರ್ತಿಯಾಗಲಿ, ರೈತರ ಕೃಷಿ ಚಟುವಟಿಕೆಗಳು ಸುಗಮವಾಗಿ ಸಾಗಲಿ ಹಾಗೂ ಜನಜೀವನ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಲಾಯಿತು.

ಬಳಿಕ ಮಾತನಾಡಿದ ಮೇಯರ್ ಪಿ.ಗಾದೆಪ್ಪ, ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ವರುಣಯಾಗ ಮಾಡುವುದಾಗಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಂಕಲ್ಪ ಮಾಡಿಕೊಂಡಿದ್ದರು.

ಮಳೆಯ ಕೊರತೆಯಿಂದ ರೈತರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸದಂತೆ ಪ್ರಕೃತಿಯ ಅನುಗ್ರಹ ದೊರೆಯಲಿ ಎಂಬ ಉದ್ದೇಶದಿಂದ ಈ ವಿಶೇಷ ಪೂಜೆ ಮತ್ತು ವರುಣಯಾಗವನ್ನು ಆಯೋಜಿಸಲಾಗಿದೆ. ಕೃಷಿ ಪ್ರಧಾನವಾದ ಕರ್ನಾಟಕದಲ್ಲಿ ಈ ಬಾರಿ ಬರದ ಛಾಯೆ ಆವರಿಸಿದೆ. ಇದರಿಂದ ಅನ್ನದಾತರಾಗಿರುವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಈ ಬಾರಿ ಉತ್ತಮ ಮಳೆಯಾಗಿ ಸಮೃದ್ಧವಾಗಿ ಬೆಳೆ ಬೆಳೆಯುವಂತಾಗಲಿ. ಎಲ್ಲೆಡೆ ಹಸಿರು ಹೊನಲು ಮೂಡಲಿ ಎಂದು ಪೂಜೆ ಸಲ್ಲಿಸಿ, ವರುಣಯಾಗ ನಡೆಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವಾಲಯದ ಅರ್ಚಕರು ವಿಶೇಷ ಅಲಂಕಾರ ಮಾಡಿದ್ದ ದೇವಿಗೆ ಪೂಜೆ ಸಲ್ಲಿಸಿ, ಪೂರ್ಣಾಹುತಿ ನೆರವೇರಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಮಳೆ, ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.


ಕಮ್ಮರಚೇಡು ಮಠದ ಶ್ರೀಕಲ್ಯಾಣಸ್ವಾಮಿ, ಗ್ರಾಮೀಣ ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಹೊನ್ನಳ್ಳಿ ತಿಮ್ಮನಗೌಡ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.