ಬಳ್ಳಾರಿ: ದೇಶದ ಭದ್ರತೆ, ದಕ್ಷತೆಗಾಗಿ ಮಾಡುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣ ಹಾಳು ಮಾಡಲಾಗುತ್ತಿದೆ. ಕೂಡಲೇ ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಚುನಾವಣಾ ಆಯೋಗದ ನಿಯಮಗಳನ್ನೆಲ್ಲ ಗಾಳಿಗೆ ತೂರಿ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದರು.

ಎಸ್‌ಐಆರ್‌ ಪ್ರಕ್ರಿಯೆಗೆ ಕಾಂಗ್ರೆಸ್‌ ಸರ್ಕಾರ ಮೋಸ ಮಾಡಬೇಕೆಂಬ ಉದ್ದೇಶದಿಂದ ಸಿಎಂ ಡಿ.ಕೆ. ಶಿವಕುಮಾರ್‌ ಶಾಮೀಲಾಗಿ ಮತದಾರರನ್ನು ದಿಕ್ಕು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಇಲ್ಲಿನ ಬಿಎಲ್‌ಒಗಳನ್ನು ಹೆದರಿಸಿ, ಬೆದರಿಸಿ, ಆಮಿಷವೊಡ್ಡಿ ಎಸ್‌ಐಆರ್‌ ಪ್ರಕ್ರಿಯೆ ನಡೆಸುತ್ತಿದೆ. ಬಿಎಲ್‌ಒಗಳು ಚುನಾವಣಾ ಆಯೋಗದ ಫಾರಂಗಳನ್ನು ಮನೆ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ನೀಡಬೇಕು. ಆದರೆ, ವಾಸ್ತವದಲ್ಲಿ ಬಿಎಲ್‌ಒಗಳು ದೇವಸ್ಥಾನ, ಮಸೀದಿ ಸೇರಿ ನಾನಾ ಸ್ಥಳಗಳಲ್ಲಿ ಕುಳಿತು ಜನರನ್ನು ಕರೆಸಿಕೊಂಡು ಫಾರಂಗಳನ್ನು ಭರ್ತಿ ಮಾಡುವಂತಹ ಕಾರ್ಯ ನಡೆಯುತ್ತಿದೆ. ಹೀಗಾಗಿ ರಾಜ್ಯಕ್ಕೆ ಕೇಂದ್ರದಿಂದ ಪ್ರತ್ಯೇಕ ಮೇಲು ಉಸ್ತುವಾರಿಯನ್ನು ನೇಮಿಸಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಗೆ ಮೋಸ ಮಾಡಿ, ಅಕ್ರಮ ಬಾಂಗ್ಲಾ ವಲಸಿಗರಿಗೆ ಮತದಾರರ ಚೀಟಿ ವಿತರಿಸಿ ಅವರನ್ನು ವೋಟ್‌ಬ್ಯಾಂಕ್‌ನ್ನು ಆಗಿಸಿಕೊಂಡು ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ದುರುದ್ದೇಶ ಹೊಂದಲಾಗಿದೆ. ದೇವಸ್ಥಾನದಲ್ಲಿ, ಮಸೀದಿ ಮಂದಿರದಲ್ಲಿ ಕುಳಿತು ಫಾರಂ ನೀಡಿ ಮಾಹಿತಿ ಪಡೆಯುವ ಬಿಎಲ್‌ಒಗಳ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕು. ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.