ಧಾರವಾಡ:

ಕಳೆದ ನಾಲ್ಕೈದು ದಿನಗಳಿಂದ ಕೆಲವು ಪ್ರದೇಶ ಹೊರತುಪಡಿಸಿ ಜಿಲ್ಲಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ವಾಡಿಕೆಯ 3.6 ಮಿಮೀ ಮಳೆ ಪೈಕಿ 8.3 ಮಿಮೀ ಉತ್ತಮ ಮಳೆಯಾಗಿದೆ.

ಹವಾಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಅತೀ ಹೆಚ್ಚು 16.3 ಮಿಮೀ ಅಳ್ನಾವರದಲ್ಲಿ ಆಗಿದ್ದು, ವಾಡಿಕೆಯಂತೆ 9.5ರಷ್ಟಾಗಬೇಕಿತ್ತು. ಕಲಘಟಗಿಯಲ್ಲಿ 6.3 ಮಿಮೀ ಪೈಕಿ 14.2 ಮಿಮೀ, ಧಾರವಾಡದಲ್ಲಿ 3.2 ಮಿಮೀ ಪೈಕಿ 9.3 ಮಿಮೀ, ಕುಂದಗೋಳದಲ್ಲಿ 2.4ರ ಪೈಕಿ 7.6 ಮಿಮೀ, ಹುಬ್ಬಳ್ಳಿಯಲ್ಲಿ 3.4ರ ಪೈಕಿ 7.2, ಅಣ್ಣಿಗೇರಿಯಲ್ಲಿ 1.4ರ ಪೈಕಿ 6.5, ಹುಬ್ಬಳ್ಳಿ ನಗರದಲ್ಲಿ 3.3ರ ಪೈಕಿ 4.2 ಹಾಗೂ ಅತೀ ಕಡಿಮೆ ಎಂದರೆ ನವಲಗುಂದ ತಾಲೂಕಿನಲ್ಲಿ 1.3ರ ಪೈಕಿ 3.1 ಮಿಮೀ ಮಳೆಯಾಗಿದೆ. ಜೂನ್‌ ತಿಂಗಳೂ ಪೂರ್ತಿ ಬಿಸಿಲಿನ ವಾತಾವರಣದಿಂದ ಬಿತ್ತದ ಬೆಳೆ ಒಣಗುವ ಹಂತಕ್ಕೆ ಬಂದಿದ್ದವು. ನವಲಗುಂದ ತಾಲೂಕಿನಲ್ಲಂತೂ ತೀವ್ರ ಬರಗಾಲದ ಛಾಯೆ ಕಾಣುವ ಸಾಧ್ಯತೆಗಳಿದ್ದವು. ಆದರೆ, ಸಕಾಲಕ್ಕೆ ಮಳೆ ಕರುಣೆ ತೋರಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಮಳೆಯಿಂದ ಅನಾಹುತ ಆಗದಂತೆ ಎಚ್ಚರ ವಹಿಸಿ

ಪ್ರಸ್ತುತ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕುಡಿಯುವ ನೀರು, ರಸಗೊಬ್ಬರ, ಮೇವಿನ ಕೊರತೆ ಇಲ್ಲ. ಒಂದು ವೇಳೆ ಕೊರತೆ ಕಂಡುಬಂದಲ್ಲಿ ಅಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಹೇಳಿದರು.ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳ ನಿರಂತರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಆಗದಂತೆ ಎಚ್ಚರ ವಹಿಸಲು ಸೂಚಿಸಿದರು.ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಮುಂಗಾರು ಹಂಗಾಮಿನ ಜೂ. 1ರಿಂದ ಜು. 6ರ ವರೆಗೆ ವಾಡಿಕೆ ಮಳೆ 150 ಮಿಮೀ ಪೈಕಿ 120 ಮಿಮೀ ಮಳೆಯಾಗಿದ್ದು, 27 ಮಿಮೀ ಕೊರತೆ ಇದೆ. ಈ ಹಂಗಾಮಿನಲ್ಲಿ ಶೇ. 90ರಷ್ಟು ಬಿತ್ತನೆಯ ಗುರಿಯಾಗಿದೆ. ಪ್ರಮುಖವಾಗಿ ಮುಸುಕಿನಜೋಳ, ಭತ್ತ, ಉದ್ದು, ಹೆಸರು, ಶೇಂಗಾ, ಸೋಯಾಅವರೆ ಹಾಗೂ ಹತ್ತಿ, ಕಬ್ಬು ಬೆಳೆಯಲಾಗಿದ್ದು, ಸಮರ್ಪಕ ರಸಗೊಬ್ಬರ ಹಾಗೂ ಬೀಜದ ಸಂಗ್ರಹ ಇದೆ ಎಂಬ ಮಾಹಿತಿ ನೀಡಿದರು.


ಸ್ಥಳೀಯ ನಗರ ಸಂಸ್ಥೆಗಳಲ್ಲಿ 100 ವಾರ್ಡ್‌ಗಳಿದ್ದು, ಯಾವುದೇ ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿಲ್ಲ. 80 ವಾರ್ಡ್‌ಗಳಲ್ಲಿ ಪ್ರತಿ ದಿನ ನೀರು ಪೂರೈಕೆ ಮಾಡುತ್ತಿದ್ದು, ಉಳಿದ 20 ವಾರ್ಡ್‌ಗಳಲ್ಲಿ 2ರಿಂದ 3 ದಿನದ ವರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಐದು ಸ್ಥಳೀಯ ನಗರ ಸಂಸ್ಥೆಗಳಲ್ಲಿನ ಕೆರೆಗಳಲ್ಲಿ ಕುಡಿಯುವ ನೀರಿನ ಶೇಖರಣೆ ಸಾಕಷ್ಟು ಇರುವುದರಿಂದ ಪ್ರಸ್ತುತ ಯಾವುದೇ ಸಮಸ್ಯೆ ಇಲ್ಲ ಎಂದರು.ಪೂರ್ವ ಮುಂಗಾರು ಹಂಗಾಮಿನಲ್ಲಿ ಒಂದು ಮನೆಗೆ ಹಾನಿಯಾಗಿದ್ದು, ₹ 1.20 ಲಕ್ಷ ಪರಿಹಾರ ವಿತರಿಸಲಾಗಿದೆ. ಐದು ಭಾಗಶಃ ಮನೆಗಳಿಗೆ ಹಾನಿಯಾಗಿದ್ದು, ಅವುಗಳಿಗೆ ಪರಿಹಾರ ವಿತರಿಸಿದೆ. ಸಿಡಿಲು ಬಡಿದು ಕವಲಗೇರಿಯಲ್ಲಿ ಒಂದು ಜೀವ ಹಾನಿಯಾಗಿದ್ದು, ₹ 5 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.

ವಿಡಿಯೋ ಸಂವಾದದಲ್ಲಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಸೇರಿದಂತೆ ಕೃಷಿ, ತೋಟಗಾರಿಕೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.