ಬಸವರಾಜ ಹಿರೇಮಠ
ಧಾರವಾಡ:ರಾಜ್ಯದ ಬಹುತೇಕ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡಿಕೊಳ್ಳದ ಹಿನ್ನೆಲೆ ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಹಾಗೂ ಸಂಶೋಧನೆ ಮೇಲೆ ದುಷ್ಪರಿಣಾಮ ಬೀರಿದೆ.
ರಾಜ್ಯದಲ್ಲಿರುವ 440 ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ 201 ಗ್ರಂಥಪಾಲಕರಿಲ್ಲ. ಕಳೆದ ದಶಕದಲ್ಲಿ ಸರ್ಕಾರವು ಬೋಧನಾ ಹುದ್ದೆಗಳಿಗೆ ನೇಮಕಾತಿ ಮಾಡಿದರೂ ಗ್ರಂಥಪಾಲಕರ ಹುದ್ದೆಗಳನ್ನು ಕಡೆಗಣಿಸಿದೆ. ರಾಜ್ಯದ ವಿಶ್ವವಿದ್ಯಾಲಯಗಳು 2008ರಿಂದ ಗ್ರಂಥಪಾಲಕರ ನೇಮಕಾತಿಯನ್ನು ಕಂಡಿಲ್ಲ. 17 ವರ್ಷಗಳಿಗೂ ಹೆಚ್ಚು ಕಾಲ ಖಾಲಿ ಹುದ್ದೆಗಳಿದ್ದು, ಗುತ್ತಿಗೆ ಆಧಾರದ ಮೇಲೆಯೇ ಗ್ರಂಥಾಲಯಗಳು ನಡೆಯುತ್ತಿವೆ.112ರಲ್ಲಿ 15 ಜನರ ಸೇವೆ:
ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಪರಿಸ್ಥಿತಿ ಇನ್ನೂ ಆತಂಕಕಾರಿ. ಎರಡು ದಶಕಗಳಿಂದ ಗ್ರಂಥಪಾಲಕರನ್ನು ನೇಮಿಸಿಲ್ಲ. 112 ಮಂಜೂರಾದ ಹುದ್ದೆಗಳಿದ್ದರೆ, ಪ್ರಸ್ತುತ 15 ಗ್ರಂಥಪಾಲಕರು ಮಾತ್ರ ಸೇವೆಯಲ್ಲಿದ್ದಾರೆ, 97 ಹುದ್ದೆಗಳು ಖಾಲಿ ಉಳಿದಿವೆ. ರಾಜ್ಯದ ವಸತಿ ಶಾಲೆಗಳಲ್ಲೂ ಗ್ರಂಥಪಾಲಕರ ನೇಮಕಾತಿ ಕನಿಷ್ಠವಾಗಿದೆ.
ಪಿಯುಸಿ ಹಂತದಿಂದ ವಿಶ್ವವಿದ್ಯಾಲಯ ಹಂತದ ವರೆಗೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸುವಲ್ಲಿ ಗ್ರಂಥಾಲಯಗಳು ಪ್ರಮುಖ ಕಾರ್ಯ ಮಾಡುತ್ತವೆ. ಮೊಬೈಲ್ ಕಾಲದಲ್ಲೂ ಪುಸ್ತಕದ ಓದಿಗೆ ಹೆಚ್ಚಿನ ಮಹತ್ವ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಗ್ರಂಥಾಲಯಗಳೇ ಪ್ರಮುಖ ಆಕರ ಗ್ರಂಥಗಳು. ಇಷ್ಟಾಗಿಯೂ ಸರ್ಕಾರದ ಗ್ರಂಥಾಲಯ, ಗ್ರಂಥಪಾಲಕರನ್ನು ನಿರ್ಲಕ್ಷಿಸುತ್ತಿದೆ ಎಂದು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ.
ರಾಜ್ಯದಲ್ಲಿ ಅನೇಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಡಿಜಿಟಲ್ ಮತ್ತು ಹೈಟೆಕ್ ಗ್ರಂಥಾಲಯಗಳಾಗಿ ಉನ್ನತೀಕರಣಗೊಂಡಿದ್ದರೂ ಅಲ್ಲಿಯ ಗ್ರಂಥ ಭಂಡಾರದ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ತಲುಪಲು ತಜ್ಞ ಗ್ರಂಥಪಾಲಕರ ಕೊರತೆ ಅನುಭವಿಸುತ್ತಿದ್ದಾರೆ. ಅವುಗಳನ್ನು ಗ್ರಂಥಪಾಲಕರ ಬದಲಿಗೆ ಬೋಧನಾ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂಬುದೇ ಬೇಸರದ ಸಂಗತಿ.ಶೀಘ್ರ ನೇಮಕಾತಿ ಆಗಲಿ:
ಇದು ಜ್ಞಾನದ ಯುಗವಾಗಿದ್ದು, ವಿದ್ಯಾರ್ಥಿಗಳಿಗೆ ಅಧಿಕೃತ ಮತ್ತು ಸಂಬಂಧಿತ ಮಾಹಿತಿ ಪಡೆಯಲು, ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಡೀಪ್‌ಫೇಕ್ ವಿಷಯ ಸೇರಿದಂತೆ ತಪ್ಪು ಮಾಹಿತಿಯಿಂದ ವಿದ್ಯಾರ್ಥಿಗಳನ್ನು ದೂರವಿಡಲು, ಪ್ರತಿ ಕಾಲೇಜಿನಲ್ಲಿ ಅರ್ಹ ಗ್ರಂಥಪಾಲಕರು ಇರಬೇಕು. ಸರ್ಕಾರ ತಕ್ಷಣ ನೇಮಕಾತಿ ಪ್ರಾರಂಭಿಸಬೇಕು ಎಂದು ಕರ್ನಾಟಕ ಗ್ರಂಥಪಾಲಕರ ಸಂಘದ ಉಪಾಧ್ಯಕ್ಷ ಡಾ. ರುದ್ರಮುನಿ ಆಗ್ರಹಿಸಿದ್ದಾರೆ.ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್, ನೆಟ್ ಮತ್ತು ಎಸ್‌ಇಟಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅನೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳು ಅಧ್ಯಯನ ಸಾಮಗ್ರಿಗಳ ಏಕೈಕ ಕೈಗೆಟುಕುವ ಮೂಲ ಸ್ಥಳ ಗ್ರಂಥಾಲಯ. ಹೀಗಾಗಿ ಗ್ರಂಥಾಲಯ ಹಾಗೂ ಅಲ್ಲಿ ತಜ್ಞರ ನೇಮಕಾತಿ ಸದ್ಯದ ನಮ್ಮ ಬೇಡಿಕೆ ಎಂದು ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿ ಅಶುತೋಷ ಗಾಯಕವಾಡ ಹೇಳುತ್ತಾರೆ. 5,202 ದೈಹಿಕ ಬೋಧಕರ ಹುದ್ದೆ...
ಇನ್ನು, ದೈಹಿಕ ಬೋಧಕರ ನೇಮಕಾತಿ ಕೂಡ ಸ್ಥಗಿತಗೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ನಿರುದ್ಯೋಗಿ ದೈಹಿಕ ಬೋಧಕರ ಸಂಘದ ನೀಡಿರುವ ಮಾಹಿತಿಯಂತೆ, ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಲ್ಲಿ 5,202 ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರ ದೈಹಿಕ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಪಠ್ಯಪುಸ್ತಕ ಪರಿಚಯಿಸಿದ್ದರೂ, ವಿದ್ಯಾರ್ಥಿಗಳಿಗೆ ಕಲಿಸಲು ತರಬೇತಿ ಪಡೆದ ಬೋಧಕರು ಇಲ್ಲ. ದೈಹಿಕ ಸದೃಢತೆ ಶೈಕ್ಷಣಿಕ ಕಲಿಕೆಯಷ್ಟೇ ಮುಖ್ಯವಾಗಿದೆ ಮತ್ತು ಸರ್ಕಾರ ತಕ್ಷಣ ನೇಮಕಾತಿ ಅಧಿಸೂಚನೆ ಹೊರಡಿಸಲು ಅವರು ಆಗ್ರಹಿಸುತ್ತಾರೆ.