ಹಾವೇರಿ: ಜಿಲ್ಲೆಯಲ್ಲಿ ಮಳೆ ಹೆಚ್ಚಿಸುವ ಉದ್ದೇಶದಿಂದ ಕೈಗೊಳ್ಳಲಾದ ಮೋಡ ಬಿತ್ತನೆ ಕಾರ್ಯಾಚರಣೆ ನಾಲ್ಕು ತಾಲೂಕುಗಳಲ್ಲಿ ಸೋಮವಾರ ಯಶಸ್ವಿಯಾಗಿ ನಡೆಸಲಾಗಿದೆ.
ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಒಡೆತನದ ಕಂಪನಿ ಮೂಲಕ ಜಿಲ್ಲೆಯಲ್ಲಿ ಸೋಮವಾರ ಮೋಡ ಬಿತ್ತನೆ ಕಾರ್ಯಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗಿದ್ದು, ಹಾನಗಲ್ಲ ಹಾಗೂ ಸವಣೂರು ತಾಲೂಕುಗಳ ವ್ಯಾಪ್ತಿಯಲ್ಲಿ ಎರಡು ಬಾರಿ, ರಾಣಿಬೆನ್ನೂರು ಹಾಗೂ ಹಾವೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಒಂದು ಬಾರಿ ಯಶಸ್ವಿಯಾಗಿ ನಡೆಸಲಾಗಿದೆ.ಆದರೆ ಬ್ಯಾಡಗಿ, ರಟ್ಟಿಹಳ್ಳಿ, ಹಿರೇಕೆರೂರು ಹಾಗೂ ಶಿಗ್ಗಾಂವಿ ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೆ ಅಗತ್ಯವಾದ ಮೋಡಗಳು ಲಭ್ಯವಾಗದ ಕಾರಣ ಅಲ್ಲಿ ಕ್ಲೌಡ್ ಸೀಡಿಂಗ್ ನಡೆಸಲು ಸಾಧ್ಯವಾಗಿಲ್ಲ. ಮೋಡಗಳ ಲಭ್ಯತೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಮತ್ತೆ ಮೋಡ ಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆ ಚುರುಕು: ಜಿಲ್ಲೆಯಲ್ಲಿ ಭಾನುವಾರದಿಂದಲೇ ಮಳೆ ವಾತಾವರಣ ನಿರ್ಮಾಣವಾಗಿದ್ದು, ಸೋಮವಾರವೂ ಜಿಟಿಜಿಟಿ ಮಳೆಯಾಗುತ್ತಿದೆ. ಮೋಡ ಬಿತ್ತನೆಯಿಂದ ಮಳೆ ಸುರಿಯುತ್ತಿದೆಯೋ ಅಥವಾ ನೈಸರ್ಗಿಕವಾಗಿಯೋ ಎಂಬುದು ತಿಳಿದುಬಂದಿಲ್ಲ. ಒಟ್ಟಿನಲ್ಲಿ ಮಳೆಯಾಗುತ್ತಿರುವುದರಿಂದ ಮೋಡ ಬಿತ್ತನೆ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.ಮುಂಗಾರಿನ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ತೊಗರಿ ಹಾಗೂ ಸೋಯಾಬೀನ್ ಬಿತ್ತನೆ ಮಾಡಿದ್ದ ರೈತರಲ್ಲಿ ಮಳೆ ಬೀಳುತ್ತಿರುವುದರಿಂದ ಹೊಸ ಭರವಸೆ ಮೂಡಿದಂತಾಗಿದೆ.