ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಮಹತ್ವವನ್ನು ವಿಶ್ವಕ್ಕೆ ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಚಿಂತಕರು.

ಬಳ್ಳಾರಿ: ಮನುಷ್ಯ ಸೇರಿದಂತೆ ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನ ಅಂಶ ಅಡಗಿದೆ. ಆದರೆ, ಆ ದೈವತ್ವವನ್ನು ಸಂಪೂರ್ಣವಾಗಿ ಅಭಿವ್ಯಕ್ತಗೊಳಿಸುವ ಸಾಮರ್ಥ್ಯ ಮನುಷ್ಯನಿಗಷ್ಟೇ ಇದೆ. ದೃಢ ಸಂಕಲ್ಪ, ಸನ್ಮಾರ್ಗ, ಆತ್ಮಸಾಧನೆ ಹಾಗೂ ನಿರಂತರ ಸಾಧನೆಯ ಮೂಲಕ ಸಾಮಾನ್ಯ ಮನುಷ್ಯ ಕೆಲವೇ ವರ್ಷಗಳಲ್ಲಿ ದೈವೀ ಗುಣಗಳನ್ನು ಮೈಗೂಡಿಸಿಕೊಳ್ಳಬಹುದು ಎಂದು ಗದಗ-ವಿಜಯಪುರ ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.

ನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಪಾಂಚಜನ್ಯ ಸಭಾಂಗಣದಲ್ಲಿ ಜರುಗಿದ ವಿವೇಕ ಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಸ್ವಾಮಿ ವಿವೇಕಾನಂದರ ಲೀಲಾಮೃತ ಹಾಗೂ ಸನಾತನ ಧರ್ಮದ ಮಹತ್ವ ಕುರಿತು ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಮಹತ್ವವನ್ನು ವಿಶ್ವಕ್ಕೆ ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಚಿಂತಕರು. ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಅವರು ಹಿಂದೂ ಧರ್ಮದ ಸಹಿಷ್ಣುತೆ, ಸರ್ವಧರ್ಮ ಸಮಭಾವ, ವಿಶ್ವಬಂಧುತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ್ದರು. ಅವರ ಭಾಷಣ ಇಂದಿಗೂ ವಿಶ್ವದಾದ್ಯಂತ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಹಿಂದೂ ಧರ್ಮವು ಎಲ್ಲ ಧರ್ಮಗಳನ್ನು ಗೌರವಿಸುವ ಸಂಸ್ಕೃತಿಯನ್ನು ಹೊಂದಿದ್ದು, ಯಾವುದೇ ಧರ್ಮದ ವಿರುದ್ಧ ದ್ವೇಷವನ್ನು ಬೋಧಿಸುವುದಿಲ್ಲ. ಪರಸ್ಪರ ಗೌರವ, ಸಹಬಾಳ್ವೆ ಮತ್ತು ಮಾನವ ಕಲ್ಯಾಣದ ಸಂದೇಶವೇ ಸನಾತನ ಧರ್ಮದ ಸಾರವಾಗಿದೆ. ಆದ್ದರಿಂದ, ಹಿಂದೂ ಧರ್ಮದ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಮುನ್ನ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಸೇರಿದಂತೆ ಧರ್ಮದ ಮೂಲ ತತ್ವಗಳನ್ನು ಅಧ್ಯಯನ ಮಾಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಅಪಾರ ಸಂಪತ್ತು ಗಳಿಸುವುದು ಅಥವಾ ಅಧಿಕಾರದ ಗದ್ದುಗೆ ಏರುವುದು ಮಾತ್ರ ಸಾರ್ಥಕ ಜೀವನವಲ್ಲ. ಯಾವ ರೀತಿ ಜೀವನ ನಡೆಸುವುದರಿಂದ ಮನುಷ್ಯನಲ್ಲಿ ದೈವಾಂಶ ಜಾಗೃತವಾಗುತ್ತಾ ಹೋಗುತ್ತದೆಯೋ ಅದುವೇ ನಿಜವಾದ ಸಾರ್ಥಕ ಜೀವನ ಎನಿಸಿಕೊಳ್ಳುತ್ತದೆ. ಜೀವನದಲ್ಲಿ ಹಣ ಮತ್ತು ಅಧಿಕಾರ ಅಗತ್ಯವೇ ಸರಿ. ಆದರೆ, ಅವುಗಳನ್ನು ಧರ್ಮದ ಮಾರ್ಗದಲ್ಲಿ ಸಂಪಾದಿಸಬೇಕು. ವಾಮಮಾರ್ಗದಲ್ಲಿ ಗಳಿಸಿದ ಸಂಪತ್ತು ಹಾಗೂ ಅನ್ಯಾಯದಿಂದ ಪಡೆದ ಅಧಿಕಾರದಿಂದ ಸಮಾಜಮುಖಿ ಸೇವೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಡಾ.ರವಿರೆಡ್ಡಿ ಹಾಗೂ ನಿವೃತ್ತ ಉಪನ್ಯಾಸಕ ಮಂಜುನಾಥ ಕಾರ್ಯಕ್ರಮದ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮ ಮುನ್ನ ಹಿಂದೂಸ್ತಾನಿ ಗಾಯಕ ಬೆಳಗಲ್ಲು ಹನುಮಂತು ಹಾಗೂ ಬೆಳಗಲ್ಲು ರೇಖಾ ಅವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ತಿಪ್ಪೇಸ್ವಾಮಿ ಮುದ್ದಟನೂರು ಹಾರ್ಮೋನಿಯಂ, ಎಂ.ವೀರೇಶ್ ಕುರುಗೋಡು ತಬಲಾ ಸಾಥ್ ನೀಡಿದರು.

ಪ್ರಭುದೇವ ಕಪ್ಪಗಲ್ಲು ಹಾಗೂ ಅಡವಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.