ಅಮರೇಶ್ವರಸ್ವಾಮಿ ಕಂದಗಲ್ಲಮಠ
ಪಟ್ಟಣದ ಬಸ್ ನಿಲ್ದಾಣದ ಹಿಂದುಗಡೆ ಯಮನೂರಸ್ವಾಮಿ ದರ್ಗಾ ಇದೆ. ದರ್ಗಾಕ್ಕೆ ಹಿಂದೂ ಮುಸ್ಲಿಂ ಭಕ್ತರು ನಡೆದುಕೊಳ್ಳುತ್ತಾರೆ. ತಮ್ಮ ಕಾಲನಿಯಲ್ಲಿರುವ ಯಮನೂರಸ್ವಾಮಿ ದರ್ಗಾದ ದೇವರ ಹೆಸರಿನಲ್ಲಿಯೇ ಸ್ಥಳೀಯ ಯುವಕರು ಯಮನೂರಸ್ವಾಮಿ ಯುವಕ ಸಂಘ ಸಹ ಮಾಡಿಕೊಂಡಿದ್ದಾರೆ. ಕಳೆದ 29 ವರ್ಷದಿಂದ ಯಮನೂರಸ್ವಾಮಿ ಹೆಸರಿನಲ್ಲಿಯೇ ಗಣಪತಿ ಸ್ಥಾಪನೆ ಮಾಡುತ್ತಾ ಬಂದಿದ್ದಾರೆ. ಸ್ಥಳೀಯ ಸಂಘದಲ್ಲಿ 100 ಯುವಕರಿದ್ದೂ, ನೂರರಲ್ಲಿ 40 ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಪಟ್ಟಣದಲ್ಲಿ ಯಮನೂರಸ್ವಾಮಿ ಸಂಘದಿಂದ ಕೂರಿಸುವ ಗಣಪತಿಗೆ ನಿತ್ಯ ಒಬ್ಬಿಬ್ಬರು ಪೂಜಾ ಸೇವೆ ಸಹ ಹಮ್ಮಿಕೊಂಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಮುಸ್ಲಿಮರು ಗಣಪತಿಗೆ ಪೂಜೆ ಸಲ್ಲಿಸುತ್ತಾರೆ. ಇದೊಂದು ಹಿಂದೂ ಹಾಗೂ ಮುಸ್ಲಿಂ ಭಾವೈಕ್ಯದ ಪ್ರತೀಕ ಆಗಿದ್ದು, ಕೋಮು ಸಾಮರಸ್ಯ ಗಟ್ಟಿಯಾಗಿದೆ. ಈ ವರ್ಷ ಯಮನೂರಸ್ವಾಮಿ ಸಂಘದವರು ರಾಮ (ಗಣಪ), ರಾವಣ ಗಣಪತಿ ಸ್ಥಾಪನೆ ಮಾಡಿದ್ದಾರೆ.
ಯಮನೂರಸ್ವಾಮಿ ಗಣಪತಿ: ಯಮನೂರಸ್ವಾಮಿ ದೇವರು ಮುಸ್ಲಿಂ ಆದರೂ ಹಿಂದೂ, ಮುಸ್ಲಿಂ ನಾವೆಲ್ಲರೂ ಕೂಡಿ ಕಾಲನಿಯಲ್ಲಿರುವ ಆ ದೇವರನ್ನು ಆರಾಧನೆ ಮಾಡುತ್ತೇವೆ. ಅದೇ ರೀತಿ ಯಮನೂರಸ್ವಾಮಿ ಹೆಸರಿನಲ್ಲಿಯೇ ಗಣಪತಿಯನ್ನು ಸ್ಥಾಪನೆ ಮಾಡಿ ಆರಾಧನೆ ಮಾಡುತ್ತೇವೆ. ಇಲ್ಲಿ ನಾವು ಸ್ಥಾಪನೆ ಮಾಡಿರುವ ಗಣಪತಿ ಯಮನೂರಸ್ವಾಮಿ ಗಣಪತಿ ಎಂದೇ ಪ್ರಸಿದ್ಧಿ. ಎಲ್ಲರೂ ಹಾಗೇ ಕರೆಯುತ್ತಾರೆ. 29 ವರ್ಷದಿಂದ ನಿರಾತಂಕವಾಗಿ ನಡೆದುಬಂದಿದೆ ಎಂದು ಯಮನೂರಸ್ವಾಮಿ ಸಂಘದ ಅಧ್ಯಕ್ಷ ಕರಬಸಯ್ಯ ಬಿನ್ನಾಳ ಹೇಳಿದರು.ಭಕ್ತಿ ಸಮರ್ಪಿಸುತ್ತ ಬಂದಿದ್ದೇವೆ: ಯಮನೂರಸ್ವಾಮಿ ಹೆಸರಿನಲ್ಲಿ ಗಣಪತಿಯನ್ನು ಸ್ಥಾಪನೆ ಮಾಡುತ್ತಾ ಬಂದಿದ್ದೇವೆ. ಹಿಂದೂ, ಮುಸ್ಲಿಂ ಎಂಬ ಭೇದ-ಭಾವ ನಮಗಿಲ್ಲ. ಗಣಪತಿ ಆರಾಧನೆ ಮಾಡುವುದು ನಮಗೆ ಸಂತಸ ನೀಡಿದೆ. ಆತನಿಗೆ ನಾವೂ 29 ವರ್ಷದಿಂದ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುತ್ತಾ ಬಂದಿದ್ದೇವೆ ಎಂದು ಫಕೀರಸಾಬ್ ನರೇಗಲ್ಲ, ರಮಜಾನಸಾಬ್ ಬೆದವಟ್ಟಿ, ರಾಜಾಸಾಬ್ ಮಟಚೂರಿ ಹೇಳುತ್ತಾರೆ.