ಕಾಪು: ಒಂದು ಸಾವಿರ ವರ್ಷಗಳಿಗೂ ಅಧಿಕ ಇತಿಹಾಸವಿರುವ ಮೊಗವೀರ ಸಮಾಜದ ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್‍ಯರ ಕಂಚಿನ ಪ್ರತಿಮೆಯನ್ನು ಮೊಗವೀರ ಸಮಾಜದ ಶ್ರದ್ಧಾ ಕೇಂದ್ರವಾದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳ ಆವರಣದಲ್ಲಿ ಸುಮಾರು 3 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲುದ್ದೇಶಿಸಲಾಗಿದೆ.
ಶುಕ್ರವಾರ ದೇವಳದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಉಚ್ಚಿಲ ಶ್ರೀಕ್ಷೇತ್ರದ ಜೀರ್ಣೋದ್ಧಾರ ಸಂದರ್ಭ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಶ್ರೀ ಮಾಧವ ಮಂಗಲ ಪೂಜಾರ್ಯರ ಪುತ್ಥಳಿ ಸ್ಥಾಪಿಸಲಾಗುತ್ತಿದೆ. ಸಮಾಜ ಬಾಂಧವರ ಸಹಕಾರದಿಂದ ನಿರ್ಮಿಸುವ ಪುತ್ಥಳಿ ಪ್ರತಿಷ್ಠಾಪನೆ ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಗುರುಭಕ್ತಿಯ ಸಂಕೇತವಾಗಲಿದೆ ಎಂದರು.
ಈ ಪುಣ್ಯ ಕಾರ್ಯದಲ್ಲಿ ಮೊಗವೀರ ಸಮಾಜ ಬಾಂಧವರು ಶಕ್ತ್ಯಾನುಸಾರ ಕಾಣಿಕೆ ನೀಡುವ ಉದ್ದೇಶದಿಂದ ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣೆ ಕಾರ್ಯಕ್ರಮ ಮಾ. 1ರಂದು ಬೆಳಗ್ಗೆ 9.30ರಿಂದ ಉಚ್ಚಿಲ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 10.30ರಿಂದ ಸಭಾ ಕಾರ್‍ಯಕ್ರಮ ನಡೆಯಲಿದೆ. ದೇವಸ್ಥಾನದ ಮುಂಭಾಗದಲ್ಲಿ ಗುರುಗಳ ಪುತ್ಥಳಿ ನಿರ್ಮಿಸಲುದ್ದೇಶಿಸಿದ್ದು, ಗುರುಗಳ ಸ್ವರ್ಣಲೇಪಿತ ಪಾದುಕೆಗಳನ್ನಿಡಲು ಉದ್ದೇಶಿಸಲಾಗಿದೆ. ಅದೇ ಜಾಗದಲ್ಲಿ ಗುರು ಪಾದಕಾಣಿಕೆ ಸಮರ್ಪಿಸಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.ಕೇರಳದ ಉಪ್ಪಳದಿಂದ ಬೈಂದೂರು ತಾಲೂಕಿನ ಶೀರೂರುವರೆಗಿನ ಒಟ್ಟು 336 ಮೊಗವೀರ ಗ್ರಾಮಸಭೆ ಹಾಗೂ ಕೂಡುಕಟ್ಟು ಸೇರಿದಂತೆ ದೇಶ ವಿದೇಶಗಳಲ್ಲಿರುವ ಮೊಗವೀರ ಸಂಘಟನೆಗಳ ಸುಮಾರು 10 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸಮಾಜ ಭಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ 500ಕ್ಕಿಂತ ಅಧಿಕ ಯುವಕರಿಂದ ಅಂಗಾಂಗ ದಾನ ನೋಂದಣಿ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೃಹತ್ ರಕ್ತದಾನ ಶಿಬಿರದ ಆಯೋಜಿಸಲಾಗುವುದು ಎಂದು ಡಾ.ಜಿ. ಶಂಕರ್ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಪಾಧ್ಯಕ್ಷ ಮೋಹನ ಬೆಂಗ್ರೆ, ಉಚ್ಚಿಲ ಕ್ಷೇತ್ರಾಧ್ಯಕ್ಷ ಗಿರಿಧರ್ ಸುವರ್ಣ, ಪುತ್ಥಳಿ ನಿರ್ಮಾಣ ಸಮಿತಿ ಕಾರ್‍ಯಾಧ್ಯಕ್ಷ ಮನೋಜ್ ಸಾಲ್ಯಾನ್, ಮೊಗವೀರ ಮಹಾಜನ ಸಂಘ ಪ್ರಧಾನ ಕಾರ್‍ಯದರ್ಶಿ ಶರಣ್ ಕುಮಾರ್ ಮಟ್ಟು ಮೊದಲಾದವರಿದ್ದರು.