ವಾಹನಗಳ ಮೇಲೆ ಜಾಹೀರಾತು ಫಲಕ ಅಳವಡಿಕೆ

KannadaprabhaNewsNetwork |  
Published : Jan 17, 2026, 02:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆ ಖಾಸಗಿ ಸಂಸ್ಥೆಯವರ ವಾಹನಗಳ ಮೇಲೆ ಅವರ ಕಂಪನಿಗಳಿಗೆ ಸಂಬಂಧಿಸಿದ ಉತ್ಪನ್ನಗಳ ಜಾಹೀರಾತು ಫಲಕಗಳ ಪ್ರಕಟಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಅನುಮೋದನೆ ನೀಡಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆ ಖಾಸಗಿ ಸಂಸ್ಥೆಯವರ ವಾಹನಗಳ ಮೇಲೆ ಅವರ ಕಂಪನಿಗಳಿಗೆ ಸಂಬಂಧಿಸಿದ ಉತ್ಪನ್ನಗಳ ಜಾಹೀರಾತು ಫಲಕಗಳ ಪ್ರಕಟಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಅನುಮೋದನೆ ನೀಡಿದೆ.

ಸಭೆಯ ಕಾರ್ಯಸೂಚಿಯಲ್ಲಿ ಒಟ್ಟು 56 ವಿಷಯಗಳು ಮಂಡನೆಯಾಗಿದ್ದು, ಅವುಗಳಲ್ಲಿ ಮೂರು ವಿಷಯಗಳು ವಾಹನಗಳ ಮೇಲೆ ಜಾಹಿರಾತು ಪ್ರಚುರಪಡಿಸಲು ಸಂಬಂದಿಸಿದ್ದಾಗಿತ್ತು. ಚಿತ್ರದುರ್ಗ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆಯವರು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿ ಸಂಬಂಧಪಟ್ಟ ಸಂಸ್ಥೆಯ ವಾಹನಗಳ ಮೇಲೆ ಜಾಹೀರಾತು ಫಲಕ ಪ್ರಕಟಿಸಲು ಕೋರಿದ್ದರು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯು ಮಧ್ಯಮವರ್ಗದ ವಾಹನಗಳಿಗೆ 750 ರ., ಭಾರಿ ಸರಕು ಸಾಗಾಣಿಕೆ ವಾಹನಗಳಿಗೆ 2000 ರು. ಶುಲ್ಕ ವಿಧಿಸಿ, ನಿರ್ಣಯ ಕೈಗೊಂಡಾಗ ಸಭೆ ಅನುಮೋದಿಸಿತು.

19 ರಹದಾರಿ ವರ್ಗಾವಣೆ ವಿಷಯಗಳ ಅಹವಾಲನ್ನು ವಿಲೇವಾರಿ ಮಾಡಲಾಯಿತು. ಸಾಮಾನ್ಯ ವರ್ಗಾವಣೆ ವಿಷಯಗಳು 16 ಹಾಗೂ 03 ಮರಣೋತ್ತರ ರಹದಾರಿ ವರ್ಗಾವಣೆ ವಿಷಯಗಳಿದ್ದು, ಪ್ರಾಧಿಕಾರವು ರಹದಾರಿದಾರರ ಪರ ವಕೀಲರ ಅಹವಾಲಗಳನ್ನು ಆಲಿಸಿ, ಅನುಮೋದಿಸಿತು.

33 ರಹದಾರಿ ವ್ಯತ್ಯಯ ವಿಷಯಗಳಲ್ಲಿ 15 ವಿಷಯಗಳು ಮಾರ್ಗ ವಿಸ್ತರಣೆ ಹಾಗೂ ಮಾರ್ಗ ಕಡಿತಕ್ಕೆ ಸಂಬಂಧಿಸಿದ್ದಾಗಿತ್ತು. ಮಜಲು ವಾಹನ ರಹದಾರಿದಾರರ ಪರ ವಕೀಲರ ಲಿಖಿತ ಅಹವಾಲುಗಳನ್ನು ಜ.31 ರವರೆಗೆ ಸಲ್ಲಿಸಲು ಕಾಲಾವಕಾಶ ನೀಡಲು ಸಭೆ ನಿರ್ಣಯಿಸಿತು.

ಖಾಸಗಿ ಬಸ್ಸು ಮಾಲೀಕರ ಸಂಘದವರು ರಹದಾರಿ ವರ್ಗಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಮೋಟಾರು ವಾಹನ ನಿಯಮಗಳ ಅನುಸಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಅಧಿಕಾರವನ್ನು ಪ್ರದತ್ತ ಮಾಡಲು ಕೋರಿದ್ದರು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಮರಣೋತ್ತರ ರಹದಾರಿ ವರ್ಗಾವಣೆ ಅಧಿಕಾರವನ್ನು ನಿಯಮಾನುಸಾರ ಪ್ರದತ್ತ ಮಾಡಲು ಸಭೆ ನಿರ್ಧರಿಸಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಪ್ರಾದೇಶಿಕ ಸಾರಿಗೆ ಅಧಿಕಾರಿ, ಕಾರ್ಯದರ್ಶಿ ಭರತ ಎಂ. ಕಾಳಿಸಿಂಗೆ, ಪ್ರಾದೇಶಿಕ ಸಾರಿಗೆ ಕಚೇರಿ ಅಧೀಕ್ಷಕ ಸಿ.ಡಿ.ಹೇಮಂತ್‍ಕುಮಾರ್, ಬಸ್ಸು ಮಾಲೀಕರ ಸಂಘದ ಪದಾಧಿಕಾರಿಗಳು, ಹೈಕೋರ್ಟ್‌ ವಕೀಲರು, ಕೆಎಸ್‍ಆರ್‍ಟಿಸಿ ಸಂಸ್ಥೆಯ ಪರ ಕಾನೂನು ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ