ಕಸ ಎಸೆಯುವ ಬ್ಲಾಕ್ ಸ್ಪಾಟ್‌ಗಳಲ್ಲಿ ಸಿಸಿಟಿವಿ ಅಳವಡಿಕೆ

KannadaprabhaNewsNetwork |  
Published : May 31, 2026, 01:30 AM IST
ಚಿತ್ರದುರ್ಗ  ಎರಡನೇ ಪುಟದ ಬಾಟಂ      | Kannada Prabha

ಸಾರಾಂಶ

ಘನತಾಜ್ಯ ವಸ್ತುಗಳ ನಿರ್ವಹಣೆ ಅನುಷ್ಠಾನ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಯಮಾನುಸಾರ ಹಾಗೂ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಕಸ ಎಸೆಯುವ ಬ್ಲಾಕ್ ಸ್ಪಾಟ್ ಜಾಗಗಳನ್ನು ಗುರುತಿಸಿ, ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ನಿಯಮ ಮೀರಿ ಕಸ ಹಾಕುವವರಿಂದ ದಂಡ ವಸೂಲಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಘನತಾಜ್ಯ ವಸ್ತುಗಳ ನಿರ್ವಹಣೆ ನಿಯಮ-2026ರ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಆರಂಭಿಕ ಹಂತದಿಂದಲೇ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಕಸ ಉತ್ಪತ್ತಿ ಮಾಡುವ ಸಂಸ್ಥೆಗಳು ತಮ್ಮ ಆವರಣದಲ್ಲೇ ಕಸ ವಿಲೇವಾರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶ ನೀಡಿ ಸ್ಥಳೀಯ ಸಂಸ್ಥೆಗಳು ಅವರಿಗೆ ಸಹಾಯ ಮಾಡಬೇಕು. ನಿಗದಿ ಸಮಯದಲ್ಲಿ ಸ್ವಂತ ವ್ಯವಸ್ಥೆ ಮಾಡಿಕೊಂಡು ನಿಯಮ ಕಡ್ಡಾಯವಾಗಿ ಪಾಲಿಸದಿದ್ದರೆ ದಂಡ ವಿಧಿಸಬೇಕು. ಇತರೆ ನಾಗರಿಕ ಸೌಲಭ್ಯಗಳನ್ನು ಕಡಿತಗೊಳಿಸಲು ಕೋರ್ಟ್ ನಿರ್ದೇಶನ ಇರುವ ಬಗ್ಗೆ ಕಸ ಉತ್ಪತ್ತಿ ಮಾಡುವ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಮಾಧ್ಯಮಗಳಲ್ಲಿ ಕಸದ ನಿರ್ವಹಣೆ ಕುರಿತು ದೂರುಗಳು ಬಂದರೆ ಇವುಗಳನ್ನು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಲಿವೆ. ಸ್ಥಳೀಯ ಸಂಸ್ಥೆಗಳ ಮೂಲ ಕರ್ತವ್ಯವೇ ಸ್ವಚ್ಛತೆ ಕಾಪಾಡುವುದಾಗಿದೆ. ವಾಹನಗಳು ಅಥವಾ ಸಿಬ್ಬಂದಿ ಕೊರತೆಯಿದ್ದರೆ, ಸರ್ಕಾರದ ಅನುದಾನಕ್ಕೆ ಕಾಯದೆ ಸ್ಥಳೀಯ ಸಂಸ್ಥೆಗಳ ಸ್ವಂತ ನಿಧಿ ಅಥವಾ 15ನೇ ಹಣಕಾಸು ಯೋಜನೆಯಡಿ ಅಗತ್ಯ ಸೌಕರ್ಯಗಳನ್ನು ಬಲಪಡಿಸಿಕೊಂಡು ನಿಯಮಾನುಸಾರ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪುನರುಚ್ಚರಿಸಿದರು. ನಗರದ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕೋಟಿಗಟ್ಟಲೆ ಮೌಲ್ಯದ ಯಂತ್ರೋಪಕರಣಗಳನ್ನು ಪ್ರತಿದಿನವೂ ಸುಸ್ಥಿತಿಯಲ್ಲಿಟ್ಟುಕೊಂಡು, ಕಸ ವಿಲೇವಾರಿ ಪ್ರಕ್ರಿಯೆ ನಿರಂತರವಾಗಿ ಸಾಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಸಿಬ್ಬಂದಿಗಳ ಹಾಜರಾತಿಗಾಗಿ ತಕ್ಷಣವೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಬೇಕು. ಘಟಕದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಅದರ ನೇರ ದೃಶ್ಯಾವಳಿಗಳನ್ನು ಕಮಿಷನರ್ ಮೊಬೈಲ್ ಹಾಗೂ ಟೇಬಲ್‌ಗೆ ಕನೆಕ್ಟ್ ಮಾಡಬೇಕು. ಇದರಿಂದ ಯಾರು ಕೆಲಸ ಮಾಡುತ್ತಿದ್ದಾರೆ, ಯಾರು ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕೆಲಸಕ್ಕೆ ಸಕಾಲದಲ್ಲಿ ಬಾರದೇ ನಿರ್ಲಕ್ಷ್ಯ ವಹಿಸುವ ಅಥವಾ ಕೇವಲ ಸಂಬಳಕ್ಕಾಗಿ ಬರುವ ಸಿಬ್ಬಂದಿ ಇದ್ದರೆ ತಕ್ಷಣವೇ ಅವರ ಸೇವೆಯನ್ನು ರದ್ದುಗೊಳಿಸಿ ಹೊಸಬರನ್ನು ತೆಗೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶಿಸಿದರು.

ಜಿಪಂ ಯೋಜನಾ ನಿರ್ದೇಶಕಿ ಕೆ.ಜಯಲಕ್ಷಿ, ಪರಿಸರ ಅಧಿಕಾರಿ ಪಲ್ಲವಿ.ಎಚ್.ವಿ, ಚಿತ್ರದುರ್ಗ ನಗರ ಪೌರಯುಕ್ತೆ ಲಕ್ಷ್ಮಿ, ಚಳ್ಳಕೆರೆ ನಗರ ಪೌರಾಯುಕ್ತೆ ಡಾ.ನಾಗವೇಣಿ ಸೇರಿದಂತೆ, ವಿವಿಧ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪರಿಸರ ಇಂಜಿನಿಯರ್‌ಗಳು, ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಬಿಡಿಟಿ ವ್ಯಕ್ತಿತ್ವ ವಿಕಸನದ ಗುರುಕುಲ: ಬಿ.ಎಲ್.ಸಂತೋಷ್
ಬಿತ್ತನೆಬೀಜ, ರಸಗೊಬ್ಬರಕ್ಕೆ ಕೊರತೆ ಆಗದಿರಲಿ