ಹೊನ್ನಾಳಿ ತಾಲೂಕಿನೆಲ್ಲೆಡೆ ಗೌರಿ, ಗಣೇಶ ಪ್ರತಿಷ್ಟಾಪನೆ

KannadaprabhaNewsNetwork |  
Published : Aug 29, 2025, 01:00 AM IST
ಹೊನ್ನಾಳಿ ಫೋಟೋ 28ಎಚ್.ಎಲ್.ಐ1.  ಗೌರಿ,  ಗಣೇಶ ಹಬ್ಬದ ಹಿನ್ನಲೆಯಲ್ಲಿ ಹೊನ್ನಾಳಿ ಪಟ್ಟಣದ ಪೇಟೆ ಹಳದಮ್ಮ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ  ಗೌರಿ ಗಣೇಶ ಸಮಿತಿಯವರು ಪ್ರತಿಷ್ಠಾಪಿಸಿರುವ ಬೃಹತ್  ಹಾಗೂ ಸುಂದರವಾದ ಗೌರಿ, ಗಣೇಶ. ಮೂರ್ತಿಗಳು. | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನಾದ್ಯಂತ ಗೌರಿ ಮತ್ತು ವಿಘ್ನನಿವಾರಕ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ಭಕ್ತಿ, ಸಂಭ್ರಮದಿಂದ ಪೂಜಾ ಕೈಂಕರ್ಯಗಳ ಮೂಲಕ ಹಬ್ಬ ಆಚರಿಸಲಾಯಿತು. ಮಂಗಳವಾರ ಸ್ವರ್ಣಗೌರಿ ವ್ರತ ಆಚರಿಸಿ, ಗೌರಿಯನ್ನು ಪ್ರತಿಷ್ಠಾಪಿಸಲಾಯಿತು.

- ಭಕ್ತರ ಮನ ಸೆಳೆಯುತ್ತಿರುವ ಹಿಂದೂ ಮಹಾಸಭಾ ಗೌರಿ ಗಣೇಶ ಸುಂದರ ಮೂರ್ತಿಗಳು

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನಾದ್ಯಂತ ಗೌರಿ ಮತ್ತು ವಿಘ್ನನಿವಾರಕ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ಭಕ್ತಿ, ಸಂಭ್ರಮದಿಂದ ಪೂಜಾ ಕೈಂಕರ್ಯಗಳ ಮೂಲಕ ಹಬ್ಬ ಆಚರಿಸಲಾಯಿತು. ಮಂಗಳವಾರ ಸ್ವರ್ಣಗೌರಿ ವ್ರತ ಆಚರಿಸಿ, ಗೌರಿಯನ್ನು ಪ್ರತಿಷ್ಠಾಪಿಸಲಾಯಿತು.

ಬುಧವಾರ ಗಣೇಶನನ್ನು ಮಂಗಳವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು. ಸುರಿಯುವ ಮಳೆಯಲ್ಲಿಯೂ ಗೌರಿ, ಗಣೇಶ ಮೂರ್ತಿಗಳನ್ನು ತಂದಿದ್ದು ಭಕ್ತರಲ್ಲಿನ ಉತ್ಸಾಹಕ್ಕೆ ಸಾಕ್ಷಿಯಾಗಿತ್ತು.

ಹೊನ್ನಾಳಿ ಪಟ್ಟಣದ ಪೇಟೆ ಹಳದಮ್ಮ ದೇವಿ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗೌರಿ, ಗಣೇಶ ಸಮಿತಿ, ಕೋಟೆ ಗಣಪತಿ, ನೀಲಕಂಠೇಶ್ವರ ದೇವಸ್ಥಾನ, ದುರ್ಗಮ್ಮ, ಮಾರಿಕಾಂಬ ದೇವಿ ದೇವಸ್ಥಾನ, ಹಿರೇಕಲ್ಮಠ, ತುಂಗಭದ್ರಾ ಬಡಾವಣೆ ಸೇರಿದಂತೆ ನಗರದಲ್ಲಿ ಹಲವಾರು ಕಡೆಗಳಲ್ಲಿ ಪ್ರತಿಷ್ಟಾಪನೆ ನಡೆಸಲಾಗಿದೆ. ತಾಲೂಕಿನ ಕುಂದೂರು, ಸಾಸ್ವೇಹಳ್ಳಿ, ಚೀಲೂರು, ಹೊಳೆ ಹರಳಹಳ್ಳಿ, ಕತ್ತಿಗೆ, ಕಡದಕಟ್ಟೆ, ಕಮ್ಮಾರಗಟ್ಟೆ, ಗೊಲ್ಲರಹಳ್ಳಿ, ಬೆನಕನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿಯೂ ಅದ್ಧೂರಿಯಾಗಿ ಗೌರಿ, ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗಿದೆ.

ಹೊನ್ನಾಳಿ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಿದ ದಿನವೇ ಕೆಲ ಗಣೇಶ ಮೂರ್ತಿಗಳನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮರೆವಣಿಗೆ ನಡೆಸಿ ವಿಸರ್ಜನೆ ಮಾಡಲಾಗಿದೆ. ಇನ್ನೂ ಕೆಲವರು ಮೂರು, ಐದು, ಏಳು, ಒಂಭತ್ತು ಹಾಗೂ ಹನ್ನೊಂದನೇ ದಿನಕ್ಕೂ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ನಡುವೆ ಹಲವಾರು ಸಮಿತಿಯವರು ಅನ್ನ ಸಂತರ್ಪಣೆ ಸಹ ಆಯೋಜಿಸಿದ್ದಾರೆ.

ಪಟ್ಟಣದ ಪೇಟೆ ಹಳದಮ್ಮ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗೌರಿ, ಗಣೇಶ ಮೂರ್ತಿಗಳನ್ನು ಸೆ.14ರಂದು ಭಾನುವಾರ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಿದ್ದು,, ಹಾಗೂ ಅಂದು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಕೂಡ ಮಾಡಲಾಗಿದೆ.

ಸೆ.11ರಂದು ಗುರುವಾರ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಮುತ್ತೈದೆಯರಿಗೆ ಬಾಗಿನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿಸಾಟಿ ನಾಗರಾಜ್ ತಿಳಿಸಿದ್ದಾರೆ.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ನಿವಾಸದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದರು. ಇಡೀ ಕುಟುಂಬ ಪೂಜೆಯಲ್ಲಿ ಪಾಲ್ಗೊಂಡು ಹಬ್ಬವನ್ನು ಆಚರಿಸಿತು.

- - -

(ಬಾಕ್ಸ್‌) * ಪೊಲೀಸ್ ಬಿಗಿ ಬಂದೋಬಸ್ತ್ ಹೊನ್ನಾಳಿ ತಾಲೂಕಿನಾದ್ಯಂತ ಸುಮಾರು 220 ಗಣಪತಿ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿದೆ. 130 ಗಣೇಶ ಪ್ರತಿಷ್ಟಾಪನೆಗೆ ಈಗಾಗಲೇ ಅನುಮತಿ ಪಡೆದಿದ್ದು, ಬಾಕಿ 90 ಗಣೇಶ ಸಮಿತಿಯವರು ಅನುಮತಿ ಪಡೆಯುತ್ತಿದ್ದಾರೆ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಡಿ.ಎ.ಆರ್., 50 ಗೃಹ ರಕ್ಷಕದಳ ಸಿಬ್ಬಂದಿ ಹಾಗೂ ಪೊಲಿಸ್ ಸಿಬ್ಬಂದಿಯನ್ನು ಆಯಕಟ್ಟಿನ ಸ್ಥಳಗಳಲ್ಲಿ ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಲಾಗಿದೆ. ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ.

- - -

-28ಎಚ್.ಎಲ್.ಐ1.ಜೆಪಿಜಿ:

ಗೌರಿ, ಗಣೇಶ ಹಬ್ಬದ ಹಿನ್ನೆಲೆ ಹೊನ್ನಾಳಿ ಪೇಟೆ ಹಳದಮ್ಮ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗೌರಿ ಗಣೇಶ ಸಮಿತಿಯಿಂದ ಪ್ರತಿಷ್ಟಾಪಿಸಿರುವ ಸುಂದರವಾದ ಬೃಹತ್‌ ಗೌರಿ, ಗಣೇಶ ಮೂರ್ತಿಗಳು ಭಕ್ತರ ಮನಸೂರೆಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ