ಮಹದೇಶ್ವರ ಬೆಟ್ಟದಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪನೆ

KannadaprabhaNewsNetwork |  
Published : Aug 27, 2025, 01:00 AM IST
ಮಹದೇಶ್ವರಬೆಟ್ಟದಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪನೆ | Kannada Prabha

ಸಾರಾಂಶ

ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ 5 ದಿನ ವಿಶೇಷ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ 5 ದಿನ ವಿಶೇಷ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಾಲೂರು ಬೃಹನ್ಮಠದ ಡಾ.ಶಾಂತಮಲ್ಲಿಕಾರ್ಜುನ ಶ್ರೀಗಳ ಸಾನಿಧ್ಯದಲ್ಲಿ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ನಡೆದವು.

ತಲಕಾವೇರಿಯಲ್ಲಿ ಸಂಕ್ರಮಣದಂದು ಕಾವೇರಿ ತೀರ್ಥೋದ್ಭವವಾಗುವಂತೆ ಗೌರಿ ಹಬ್ಬದ ದಿನ ಮಹದೇಶ್ವರ ಬೆಟ್ಟದ ಅಂತರಗಂಗೆಯ ಗೌರಿ ಹೊಂಡದಲ್ಲಿ ನೀರು ಜಿನುಗುವುದು ಇಲ್ಲಿನ ಮತ್ತೊಂದು ವಿಶೇಷ. ಹಾಗಾಗಿ ಬೇಡಗಂಪಣ ಅರ್ಚಕರು ಉಪವಾಸವಿದ್ದು, ಪ್ರತಿ ವರ್ಷ ಗೌರಿ ಹಬ್ಬದ ದಿನದಂದು ಮಾದಪ್ಪನ ಸನ್ನಿಧಿಯಲ್ಲಿ ಸಾಲೂರು ಬೃಹನ್ಮಠದ ಶ್ರೀಗಳ ಸಾನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಸ್ವರ್ಣ ಗೌರಿ ವ್ರತದಂದು ಬೇಡಗಂಪಣ ಅರ್ಚಕರು, ಸಾಲೂರು ಶ್ರೀ ಹಾಗೂ ಭಕ್ತ ರೊಂದಿಗೆ ಮೆರವಣಿಗೆಯ ಮೂಲಕ ಅಂತರಗಂಗೆಯ ಸಮೀಪದ ಗೌರಿ ಹೊಂಡಕ್ಕೆ ತೆರಳಿ ಶ್ರೀಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ನೀರು ಜಿನುಗುತ್ತಿದ್ದಂತೆಯೇ ಹೊಂಡಕ್ಕೆ ಬಾಗಿನ ಅರ್ಪಿಸಲಾಗುತ್ತದೆ. ಬಳಿಕ ಮಾದಪ್ಪನ ಅಭಿಷೇಕಕ್ಕೆ ಬೆಳ್ಳಿ ಕೊಡಗ ಹಾಗೂ ಗೌರಿ ಕಳಸಕ್ಕೆ ಹೊಂಡದ ನೀರನ್ನು ತುಂಬಿ ಬಿಲ್ವಾರ್ಚನೆ ನೆರವೇರಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು.

ಗೌರಿ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಪಲ್ಲಕ್ಕಿಯಲ್ಲಿ ಕೂರಿಸಿ ಬೆಳ್ಳಿ ಕೊಡಗ ಹಾಗೂ ಗೌರಿ ಕಳಸವನ್ನು ಹೊತ್ತ ಅರ್ಚಕರು ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದು ಪ್ರದಕ್ಷಿಣೆ ಹಾಕಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಯಿತು.

5 ದಿನಗಳ ಕಾಲ ದೇಗುಲದಲ್ಲಿ ಮಾದಪ್ಪನ ಮೂರ್ತಿ ಜತೆಗೆ ಗೌರಿ ಮೂರ್ತಿಗೂ ವಿಶೇಷ ಪೂಜೆ ಸಲ್ಲಿಸುವುದು ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದ ವಿಶೇಷ, ಈ ಎಲ್ಲ ಪೂಜೆ ಕೈಂಕರ್ಯಗಳನ್ನು ಸಾಲೂರು ಬೃಹನ್ಮಠದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆಯಲಿದೆ.

ನೀರು ತುಂಬಿದ ಕಳಸವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ 5 ದಿನಗಳ ಕಾಲ ಬೇಡಗಂಪಣರು ಕ್ಷೇತ್ರದ ಸಾಂಪ್ರದಾಯದಂತೆ ಪೂಜೆ ನೆರವೇರಿಸಲಾಗುತ್ತದೆ. ಮೊದಲ ದಿನ ಮೊಣ್ಣೆಪಾಲಿನವರು 2ನೇ ದಿನ ಪ್ರಾಧಿಕಾರ ವತಿಯಿಂದ ಗೌರಿ ಕಳಸಕ್ಕೆ ಪೂಜೆ ನಡೆಯಲಿದೆ. ಮೂರನೇ ದಿನ ದೊಡ್ಡಪಾಲಿನ ಬೇಡಗಂಪಣ ಕುಲದವರು, 4ನೇ ದಿನ ಚಿಕ್ಕಪಾಲು ಮನೆತನದವರು ಹಾಗೂ ಕೊನೆಯ ದಿನ ಸಾಲೂರು ಬೃಹನ್ಮಠದ ವತಿಯಿಂದ ಪಡಿತರ‌ ಸೇವೆಸಲ್ಲಿಸಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ವಿಶೇಷ ಪೂಜೆ ನೆರವೇರಿಸಿ ಅಂತರಗಂಗೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?