1.98 ಕೋಟಿ ವೆಚ್ಚದ ಲೈಟ್: ತಮ್ಮಯ್ಯ
ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅನುಕೂಲ ಕಲ್ಪಿಸಿ, ಅಪಘಾತ ತಡೆಗಟ್ಟುವ ಉದ್ದೇಶ ದಿಂದ ನಗರೋತ್ಥಾನ ಯೋಜನೆಯಡಿ ₹1.98 ಕೋಟಿ ವೆಚ್ಚದಲ್ಲಿ ಮೀಡಿಯನ್ ಲೈಟ್ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ₹12 ಲಕ್ಷ ವೆಚ್ಚದಲ್ಲಿ ತಂಗುದಾಣ ನಿರ್ಮಿಸಲಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.ನಗರದಲ್ಲಿ ಮಂಗಳವಾರ ಮೀಡಿಯನ್ ಲೈಟ್ಗಳನ್ನು ಉದ್ಘಾಟಿಸಿ, ತಂಗುದಾಣವನ್ನು ಸಾರ್ವಜನಿಕರ ಬಳಕೆಗೆ ಸಮರ್ಪಿಸಿ ಅವರು ಮಾತನಾಡಿದರು.
ನಗರದ ಕೆಲವು ಭಾಗಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದೆ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮೀಡಿಯನ್ ಲೈಟ್ಗಳನ್ನು ಅಳವಡಿಸಲಾಗಿದೆ. ಇದರಿಂದ ರಾತ್ರಿ ವೇಳೆ ವಾಹನಗಳ ಸಂಚಾರ ಸುಗಮವಾಗುದ ಜತೆಗೆ ಅಪಘಾತಗಳ ಅಪಾಯ ಕಡಿಮೆಯಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ತಂಗುದಾಣವನ್ನು ಸಮರ್ಪಕವಾಗಿ ಬಳಸಿ ಎಂದರು.ಆಟೋ ನಿಲ್ದಾಣ ನಿರ್ಮಾಣಕ್ಕೆ ಕ್ರಮ:ಇದೇ ಪ್ರದೇಶದಲ್ಲಿ ಆಟೋ ನಿಲ್ದಾಣ ನಿರ್ಮಿಸುವಂತೆ ಆಟೋ ಚಾಲಕರು ಹಾಗೂ ಸ್ಥಳೀಯರು ಮನವಿ ಮಾಡಿದ್ದಾರೆ. ಈ ಹಿಂದೆ ಇದ್ದ ಆಟೋ ನಿಲ್ದಾಣವನ್ನು ರಸ್ತೆ ಅಗಲೀಕರಣದ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ತೆರವುಗೊಳಿಸಿದ ನಿಲ್ದಾಣದ ಸಾಮಗ್ರಿಗಳನ್ನು ಮರುಬಳಕೆ ಮಾಡಿ ಅಗತ್ಯ ಅನುದಾನ ಒದಗಿಸಿ ಶೀಘ್ರದಲ್ಲೇ ಹೊಸ ನಿಲ್ದಾಣ ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಂತ ಹಂತವಾಗಿ ಪ್ರಗತಿಯಲ್ಲಿವೆ. ಅರಣ್ಯ ಇಲಾಖೆ ನೂತನ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ನೂತನ ಸಂಕೀರ್ಣದ ಕಾಮಗಾರಿಯೂ ನಡೆಯುತ್ತಿದೆ. ಮಾರ್ಚ್ 31ರೊಳಗೆ ಕಟ್ಟಡವನ್ನು ಉದ್ಘಾಟನೆಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದರು.ಬಡವರು ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ನೇಮಕಾತಿ ಹಾಗೂ ಅಗತ್ಯ ಸಿದ್ಧತೆ ಪೂರ್ಣಗೊಂಡ ಬಳಿಕ ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ಹೇಳಿದರು.ನಗರದ ಜನರ ಬಹುದಿನಗಳ ಬೇಡಿಕೆಯಾದ ಸುಸಜ್ಜಿತ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಾಮಗಾರಿ ತ್ವರಿತವಾಗಿ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು ₹20 ಕೋಟಿ ವೆಚ್ಚದ ಈ ಯೋಜನೆಯನ್ನು ಆ. 15ರೊಳಗೆ ಪೂರ್ಣಗೊಳಿಸಿ, ಸ್ವಾತಂತ್ರ್ಯ ದಿನಾಚರಣೆಯಂದು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.ನಗರದ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ಪ್ರೇರಣೆ. ಜನರ ನಿರೀಕ್ಷೆಗೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸಲು ಬದ್ಧ. ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.