ಯುಗಾದಿ ಜಾತ್ರೆಗೆ ಮುಹೂರ್ತ ಕಂಬ ಅಳವಡಿಕೆ

KannadaprabhaNewsNetwork | Published : Mar 25, 2025 12:46 AM

ಸಾರಾಂಶ

ಹನೂರು ಮಲೆಮಾದೇಶ್ವರ ಬೆಟ್ಟದಲ್ಲಿ ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆಯುವ ಮಹಾರಥೋತ್ಸವಕ್ಕೆ ಮುಹೂರ್ತ ಕಂಬ ಅಳವಡಿಕೆ ಪೂಜಾ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ಮಲೆಮಹದೇಶ್ವರ ಬೆಟ್ಟದಲ್ಲಿ ನಾಲ್ಕು ದಿನಗಳ ಕಾಲ ಜರುಗುವ ಯುಗಾದಿ ಜಾತ್ರಾ ಮಹೋತ್ಸವದ ಕೊನೆಯ ದಿನ ನಡೆಯುವ ರಥೋತ್ಸವಕ್ಕೆ ಮುಹೂರ್ತ ಕಂಬ ಆಳವಡಿಸಿ, ಸಾಲೂರು ಬೃಹನ್ಮಠದ ಡಾ.ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀ ಮಠದ ಪ್ರತಿನಿಧಿ ವಿಶೇಷ ಪೂಜೆ ಸಲ್ಲಿಸಿದರು.ಮ.ಬೆಟ್ಟದಲ್ಲಿ ಮಾ.27ರಿಂದ ಮಾ.30 ರವರೆಗೆ ನಾಲ್ಕು ದಿನಗಳ ಕಾಲ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಕೊನೆಯ ದಿನ ನಡೆಯುವ ಮಹಾರಥೋತ್ಸವದ ಮುಹೂರ್ತ ಕಂಬಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.27ರಂದು ಯುಗಾದಿ ಜಾತ್ರಾ ಪ್ರಯುಕ್ತ ವಿಶೇಷ ಕಾರ್ಯಕ್ರಮ ಪ್ರಾರಂಭವಾಗಲಿದೆ. 28 ರಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಸೇವೆ ಉತ್ಸವಾದಿಗಳು, 29ರಂದು ಯುಗಾದಿ ಅಮಾವಾಸ್ಯೆ ವಿಶೇಷ ಸೇವೆ ಮತ್ತು ಉತ್ಸವಾದಿಗಳು, ಮಾ.30 ರಂದು ಬೆಳಗ್ಗೆ 8 ರಿಂದ 9 ಗಂಟೆಯವರೆಗೆ ಮಹಾರಥೋತ್ಸವ ನಡೆಯಲಿದೆ. ನಂತರ ಗುರು ಬ್ರಹೋತ್ಸವ ಮತ್ತು ಅನ್ನ ಬ್ರಹೋತ್ಸವ ನಡೆಯಲಿದೆ.ಪೂಜೆ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಬೇಡಗಂಪಣ ಸಮುದಾಯದ ಸರದಿ ಆರ್ಚಕರು, ಪಾರುಪತ್ತೆದಾರ ಮಹಾಲಿಂಗನ ಕಟ್ಟೆ ಮಹಾದೇವಸ್ವಾಮಿ ಹಾಜರಿದ್ದರು. ಸಕಲ ಸಿದ್ಧತೆ: ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಚಂದ್ರಮಾನ ಯುಗಾದಿ ಹಬ್ಬದ ವಿಶೇಷ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ವಿಶೇಷ ತಾಸು ವ್ಯವಸ್ಥೆ ಹಾಗೂ ಭದ್ರತೆಯೊಂದಿಗೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳ ಬಗ್ಗೆ ಯಾವುದೇ ಲೋಪದೋಷಗಳು ಬರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಾತ್ರೆಗೆ ಸಕಲ ಸಿದ್ಧತೆ ಕ್ರಮ ಕೈಗೊಂಡಿದ್ದಾರೆ.

ಚಂದ್ರಮಾನ ಯುಗಾದಿ ಹಬ್ಬದ 4 ದಿನಗಳ ಜಾತ್ರಾ ಮಹೋತ್ಸವಕ್ಕೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ದಾಸೋಹ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಮೂಲ ಸೌಲಭ್ಯಗಳ ಕಲ್ಪಿಸುವ ನಿಟ್ಟಿನಲ್ಲಿ ಸಕಲ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಎ.ಇ.ರಘು, ಕಾರ್ಯದರ್ಶಿ, ಮಲೆಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

Share this article