ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್‌ಗಳ ಅಳವಡಿಕೆ ಕಾರ್ಯ ತುಂಗಭದ್ರಾ ಮಂಡಳಿ ಡಿ.24ರಿಂದ ಆರಂಭಿಸಲಿದೆ. ಇದಕ್ಕಾಗಿ ಈಗಾಗಲೇ ಹಳೇ ಗೇಟ್‌ಗಳ ತೆರವು ಕಾರ್ಯ ನಡೆದಿದೆ. ಈಗ ಹೊಸ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಿದೆ.
ಜಲಾಶಯದ ಒಂದೊಂದು ಕ್ರಸ್ಟ್ ಗೇಟ್ 49 ಟನ್ ಭಾರ ತೂಕದ್ದಾಗಿವೆ. 60 ಅಡಿ ಅಗಲ ಮತ್ತು 21 ಅಡಿ ಎತ್ತರವಾಗಿವೆ. ಈಗ 20 ನುರಿತ ಕಾರ್ಮಿಕರು ಮತ್ತು ಪರಿಣತ ಎಂಜಿನಿಯರ್‌ಗಳನ್ನು ಬಳಕೆ ಮಾಡಿಕೊಂಡು ಗುಜರಾತ್ ಮೂಲದ ಕಂಪನಿ ಕ್ರಸ್ಟ್ ಗೇಟ್‌ಗಳನ್ನು ಅಳವಡಿಕೆ ಮಾಡಲಿದೆ.
ಜಲಾಶಯದಲ್ಲಿ ಕ್ರಸ್ಟ್ ಗೇಟ್‌ಗಳ ಅಳವಡಿಕೆಗೆ ಗುಜರಾತ ಮೂಲದ ಕಂಪನಿಗೆ ₹52 ಕೋಟಿ ಮೊತ್ತದಲ್ಲಿ ಟೆಂಡರ್ ನೀಡಲಾಗಿದೆ. ಈಗಾಗಲೇ 15 ಕ್ರಸ್ಟ್ ಗೇಟ್‌ಗಳು ನಿರ್ಮಾಣಗೊಂಡಿವೆ. ಇನ್ನು ತಲಾ ನಾಲ್ಕು ಗೇಟುಗಳನ್ನು ಗದಗ ಮತ್ತು ಟಿಬಿ ಡ್ಯಾಂನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರ ₹10 ಕೋಟಿ ಮತ್ತು ಆಂಧ್ರಪ್ರದೇಶ ಸರ್ಕಾರ ₹20 ಕೋಟಿ ಮೊತ್ತ ಬಿಡುಗಡೆ ಮಾಡಿದೆ. ₹10 ಕೋಟಿ ಈಗಾಗಲೇ ಕಂಪನಿಗೆ ಪಾವತಿ ಮಾಡಲಾಗಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.ಜಲಾಶಯಕ್ಕೆ ಕ್ರಸ್ಟ್‌ಗೇಟ್ ಅಳವಡಿಕೆಗಾಗಿ ಈಗಾಗಲೇ 4, 11, 18, 20, 24, 27, 28ನೇ ಹಳೇಯ ಕ್ರಸ್ಟ್‌ಗೇಟ್‌ಗಳನ್ನು ತೆರವು ಮಾಡಲಾಗಿದೆ. ಜಲಾಶಯದ ನೀರಿನ ಮಟ್ಟ ಕೂಡ 1612.98 ಅಡಿಗೆ ಇಳಿದಿದೆ. ಜಲಾಶಯದಲ್ಲಿ ಈಗ 43.787 ಟಿಎಂಸಿ ನೀರು ಉಳಿದಿದೆ. ಈಗ ಜಲಾಶಯದಲ್ಲಿ ಹೊಸ ಗೇಟ್‌ಗಳ ಅಳವಡಿಕೆಗೆ ಪೂರಕವಾಗಿದ್ದು, ಗೇಟ್‌ಗಳ ಅಳವಡಿಕೆ ಹಿನ್ನೆಲೆಯಲ್ಲಿ ಜಲಾಶಯ ಪ್ರವೇಶಕ್ಕೆ ನಿರ್ಬಂಧ ಕೂಡ ವಿಧಿಸಲಾಗಿದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.
ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ಗೇಟ್ ಅಳವಡಿಕೆಗೆ ಸಿದ್ಧತೆ ನಡೆದಿದೆ.