ನರಗುಂದ: ಪಟ್ಟಣದಲ್ಲಿ ವ್ಯಕ್ತಿಯೊಬ್ಬನಿಗೆ ಮಂಗಳವಾರ ಹೃದಯಾಘಾತವಾಗಿದ್ದು, ಕುಟುಂಬದ ಸದಸ್ಯರು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೂ ವಾಹನ ಸಕಾಲಕ್ಕೆ ಬಾರದ್ದರಿಂದ ವ್ಯಕ್ತಿ ಮನೆಯಲ್ಲಿಯೇ ಸಾವಿಗೀಡಾಗಿದ್ದಾನೆಂದು ಆರೋಪಿಸಿ ತಾಲೂಕು ಆಸ್ಪತ್ರೆಯ ಎದುರು ಕುಟುಂಬಸ್ಥರು ಹಾಗೂ ದಸಂಸ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ವೇಳೆ ವೆಂಕಪ್ಪನ ಸಂಬಂಧಿ ರವಿ ಚಿಂತಾಲ ಮಾತನಾಡಿ, ಆ್ಯಂಬುಲೆನ್ಸ್ ಸಕಾಲಕ್ಕೆ ಬಂದಿದ್ದರೆ ನಮ್ಮ ಚಿಕ್ಕಪ್ಪ ಬದುಕುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ 108 ವಾಹನದ ಮುಖ್ಯಾಧಿಕಾರಿ ಬರಬೇಕು. ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಗಳು, ತಹಸೀಲ್ದಾರರು ಆಗಮಿಸಿ ಸ್ಪಷ್ಟನೆ ನೀಡಬೇಕು. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.ಸ್ಥಳಕ್ಕೆ ತಹಸೀಲ್ದಾರ್ ಶ್ರೀಶೈಲ ತಳವಾರ, ಸಿಪಿಐ ಮಂಜುನಾಥ್ ನಡುವಿನಮನಿ, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಜಡೇಶ ಭದ್ರಗೌಡ್ರ ಆಗಮಿಸಿ ಪ್ರತಿಭಟನಾನಿರತರನ್ನು ಸಮಾಧಾನಪಡಿಸಿದರು. ಬಳಿಕ ಪ್ರತಿಭಟನೆ ಕೈಬಿಟ್ಟ ಮುಖಂಡರು ಬುಧವಾರ ಮತ್ತೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗುರುನಾಥ ಕೆಂಗಾರಕರ, ದತ್ತು ಜೋಗಣ್ಣವರ, ವೀರಣ್ಣ ಮ್ಯಾಗೇರಿ, ಶರಣಪ್ಪ ಚಲವಾದಿ, ಮುತ್ತು ಸುರಕೋಡ, ಮಂಜುನಾಥ ಚಿಂತಾಲ, ಯಶವಂತ ನಡುವಿನಮನಿ, ಖಾಜು ಕಿಲ್ಲೆದಾರ ಹಾಗೂ ಡಿಎಸ್ಎಸ್ ಸದಸ್ಯರು ಭಾಗವಹಿಸಿದ್ದರು.