ಬೆಂಗಳೂರು : ಆತ್ಮ*ತ್ಯೆ ತಡೆಯುವ, ಪ್ರಯಾಣಿಕರ ರಕ್ಷಣೆ ಉದ್ದೇಶದಿಂದ ನಾಗವಾರ - ಕಾಳೇನಅಗ್ರಹಾರ ಸಂಪರ್ಕಿಸುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್‌ಡಿ) ಅಳವಡಿಕೆ ಕಾರ್ಯ ಪ್ರಾರಂಭವಾಗಿದೆ.
ದೆಹಲಿ, ಮುಂಬೈ ಹಾಗೂ ಚೆನ್ನೈನಲ್ಲಿ ಪಿಎಸ್‌ಡಿ ಈಗಾಗಲೇ ಇದೆ. ನಮ್ಮ ಮೆಟ್ರೋ ಹಸಿರು, ನೇರಳೆ, ಹಳದಿಯ 83 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇಲ್ಲ. ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಸ್ಟೀಲ್ ಗರ್ಡರ್‌ಗಳನ್ನು ಅಳವಡಿಸಲಾಗಿದೆ. ನಮ್ಮ ಮೆಟ್ರೋ ಮಾರ್ಗಗಳಲ್ಲೇ ಮೊದಲ ಬಾರಿಗೆ ಪಿಎಸ್‌ಡಿ ಅಳವಡಿಕೆಯಾಗುತ್ತಿರುವ ಮಾರ್ಗ ಇದಾಗಿದೆ.
ಕಾಳೇನ ಅಗ್ರಹಾರ - ತಾವರೆಕೆರೆ ವರೆಗಿನ (7.5ಕಿಮೀ) ಎತ್ತರಿಸಿದ ಮಾರ್ಗ ಹಾಗೂ ಡೇರಿ ಸರ್ಕಲ್ - ನಾಗವಾರದವರೆಗೆ ಸುರಂಗ ಮಾರ್ಗ ಸೇರಿ (13.76ಕಿಮೀ) ಒಟ್ಟು 21.26ಮೀ ಒಳಗೊಂಡಿದೆ. ಈ ಮಾರ್ಗ ಮುಂದಿನ ವರ್ಷಾಂತ್ಯದೊಳಗೆ ಕಾರ್ಯಾರಂಭ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
ಸುರಂಗ ಮಾರ್ಗದಲ್ಲಿ ಟ್ರ್ಯಾಕ್ ನಿರ್ಮಿಸುವ ಕಾಮಗಾರಿ, ಪ್ಲಾಟ್‌ಫಾರ್ಮ್‌ಗೆ ಪಿಎಸ್‌ಡಿ ಅಳವಡಿಕೆ ಕಾರ್ಯ ನಡೆಯುತ್ತಿದೆ. ಪ್ರತಿ ಪಿಎಸ್‌ಡಿ 2.15 ಮೀ. ಎತ್ತರವಿದ್ದು, ಇದರ ಗೇಟ್‌ಗಳು 2.15ಮೀ ಎತ್ತರವಿರಲಿದೆ. ಪ್ಲಾಟ್‌ಫಾರ್ಮ್ ಉದ್ದಕ್ಕೂ ಅಂದರೆ ರೈಲಿನ ಆರು ಬೋಗಿಗಳ ದ್ವಾರಗಳು ನಿಲ್ಲುವಲ್ಲಿ ಅನುಗುಣವಾಗಿ ಇದನ್ನು ಅಳವಡಿಸಲಾಗುತ್ತಿದೆ. ಒಟ್ಟಾರೆ ಒಂದು ನಿಲ್ದಾಣದಲ್ಲಿ ಪಿಎಸ್‌ಡಿ ಅಳವಡಿಕೆಗೆ ₹9 ಕೋಟಿ ವೆಚ್ಚವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಸದ್ಯ ಪ್ರಾಯೋಗಿಕವಾಗಿ ಪಿಎಸ್‌ಡಿ ಅಳವಡಿಸಿ ತಪಾಸಣೆ ನಡೆಸಲಾಗುವುದು. ಬಳಿಕ ಸುರಂಗ ಮಾರ್ಗದ ಎಲ್ಲ 12 ನಿಲ್ದಾಣಗಳಲ್ಲಿ ಇದನ್ನು ಅಳವಡಿಕೆ ಮಾಡಲಾಗುವುದು. ಇದಕ್ಕೆ 6 ತಿಂಗಳು ಕಾಲಾವಧಿ ತಗುಲಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
ಗುಲಾಬಿ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗಕ್ಕಾಗಿ ಒಟ್ಟೂ 80 ಕಿಮೀಗಾಗಿ 2024ರ ಜುಲೈನಲ್ಲಿ ಫ್ರಾನ್ಸ್‌ನ ಅಲ್‌ಸ್ಟೊಮ್ ಟ್ರಾನ್ಸ್‌ಪೋರ್ಟ್ ಈ ಮಾರ್ಗದಲ್ಲಿ ಸಿಬಿಟಿಸಿ (ಕಮ್ಯೂನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್) ಅಂದರೆ ಚಾಲಕ ರಹಿತವಾಗಿ ಸಂಚರಿಸುವ ರೈಲಿನ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸುತ್ತಿದೆ. ಇದೇ ಕಂಪನಿ ಗುಲಾಬಿ ಮಾರ್ಗದ 12 ನಿಲ್ದಾಣದಲ್ಲಿ ಪಿಎಸ್‌ಡಿ ಅಳವಡಿಸುತ್ತಿದೆ. ಇದಕ್ಕಾಗಿ ಜೈಕಾ (ಜಪಾನ್ ಇಂಟರ್‌ನ್ಯಾಷನಲ್ ಕೋಅಪರೇಷನ್ ಏಜೆನ್ಸಿ) ಅನುದಾನ ಬಳಸಲಾಗುತ್ತಿದೆ.
ಈಗಿನ ನೇರಳೆ ಮಾರ್ಗದಲ್ಲೂ ಮುಂದಿನ ದಿನಗಳಲ್ಲಿ ಪಿಎಸ್‌ಡಿ ಅಳವಡಿಕೆ ಆಗಲಿದ್ದು, ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ಮೆಜೆಸ್ಟಿಕ್, ಸೆಂಟ್ರಲ್ ಕಾಲೇಜು, ಕೋಣಪ್ಪನ ಅಗ್ರಹಾರ ನಿಲ್ದಾಣಗಳಲ್ಲೂ ಈ ಸುರಕ್ಷತೆ ಲಭ್ಯವಾಗಲಿದೆ.
ಗುಲಾಬಿ ಮಾರ್ಗವು ಎರಡು ಹಂತದಲ್ಲಿ ಅಂದರೆ ಎತ್ತರಿಸಿದ 7.5ಕಿಮೀ 2026ರ ಮೇ ತಿಂಗಳಲ್ಲಿ ಹಾಗೂ ಸುರಂಗ ಮಾರ್ಗದ 13ಕಿಮೀ ಡಿಸೆಂಬರ್‌ನಲ್ಲಿ ಉದ್ಘಾಟನೆ ಆಗುವ ನಿರೀಕ್ಷೆಯಿದೆ.
ಕಳೆದ ಎರಡು ವರ್ಷದಲ್ಲಿ 10ಕ್ಕೂ ಹೆಚ್ಚು ಜನರು ನಮ್ಮ ಮೆಟ್ರೋ ಟ್ರ್ಯಾಕ್‌ಗೆ ಜಿಗಿದಿರುವ ಪ್ರಕರಣ ನಡೆದಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಮಹಿಳೆಯೊಬ್ಬರು ಮೊಬೈಲ್ ಕೆಳಗೆ ಬಿತ್ತೆಂದು ತೆಗೆಯಲು ಟ್ರ್ಯಾಕ್‌ಗೆ ಇಳಿದಿದ್ದರು. ಅತ್ತಿಗುಪ್ಪೆ ಮೆಟ್ರೋ ಹಳಿ, ಸಿಲ್ಕ್ ಇನ್‌ಸ್ಟಿಟ್ಯೂಟ್ ಮೆಟ್ರೋ ಹಳಿ, ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಆತ್ಮ*ತ್ಯೆ ಪ್ರಕರಣಗಳು ನಡೆದಿದ್ದವು. ಇಂತಹ ಅವಘಡ ತಡೆಯಲು ಪಿಎಸ್‌ಡಿ ಮೆಟ್ರೋ ಹಳಿ, ಪ್ಲಾಟ್‌ಫಾರ್ಮ್ ನಡುವೆ ತಡೆಗೋಡೆಯಂತೆ ಇರಲಿದ್ದು, ರೈಲು ಬಂದಾಗ ಮಾತ್ರ ತೆರೆದುಕೊಂಡು ಪ್ರವೇಶಿಸಲು ಅನುವುಮಾಡಿಕೊಡುತ್ತವೆ. ಇದರಿಂದ ಪ್ರಯಾಣಿಕರು ಟ್ರ್ಯಾಕ್‌ಗೆ ಇಳಿಯಲು. ರೈಲು ಬರುವಾಗ ಹಾರಲು ಸಾಧ್ಯವಾಗುವುದಿಲ್ಲ.