- ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿಕೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ್, ಅಂಬಿಗರ ಚೌಡಯ್ಯ ಅವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುವುದು ಎಂದು ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ನಿಗಮ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದ್ದಾರೆ.ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ಸರ್ವಧರ್ಮ ಮಹಾಸಭಾ ವತಿಯಿಂದ ನಡೆದ ಮಹಾತ್ಮರ ಪ್ರತಿಮೆಗಳ ಸ್ಥಾಪನೆಯ 2ನೇ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶ ಸರ್ವಜನಾಂಗಗಳ ಶಾಂತಿಯ ತೋಟವಾಗಿದೆ. ಇದಕ್ಕೆ ಅನ್ವರ್ಥವಾಗಿ ಪಟ್ಟಣದಲ್ಲಿ ವಿವಿಧ ಸಮುದಾಯ ಮಹನೀಯರು ಪುತ್ಥಳಿಗಳನ್ನು ಸ್ಥಾಪಿಸಲು ಎಷ್ಟೇ ಕಷ್ಟವಾದರೂ ಸಮುದಾಯಗಳ ಸಹಕಾರದಿಂದ ಮಾಡಲಾಗುವುದು. ಪ್ರತಿ ಜಾತಿ, ಜನಾಂಗದಲ್ಲಿಯೂ ಮಹಾನ್ ನಾಯಕರು ಹುಟ್ಟಿಬಂದು ಅವರೆಲ್ಲರೂ ತಮ್ಮದೇಯಾದ ತತ್ವ, ಆದರ್ಶಗಳಿಂದ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ಕೊಟ್ಟಿದ್ದಾರೆ. ಹೀಗಾಗಿ, ಅವರೆಲ್ಲರ ಪ್ರತಿಮೆಗಳ ಸ್ಥಾಪನೆ ಮೂಲಕ ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದು ಹೇಳಿದರು.
ವಾಲ್ಮೀಕಿ ಸಮಾಜದ ಕೋಣತೆಲೆ ನಾಗಪ್ಪ, ಕುರುಬ ಸಮಾಜದ ಅಧ್ಯಕ್ಷ ನೆಲಹೊನ್ನೆ ಮೋಹನ್, ಗೌರವಾಧ್ಯಕ್ಷ ಧರ್ಮಪ್ಪ, ಬಂಜಾರ ಸಮಾಜದ ಶಿವರಾಂ ನಾಯ್ಕ, ಅಂಜು ನಾಯ್ಕ, ಅರಕರೆ ಮಧುಗೌಡ, ಸಾಸ್ವೇಹಳ್ಳಿ ಕೃಷ್ಣಮೂರ್ತಿ, ಜಿ.ಎಚ್.ತಮ್ಮಣ್ಣ, ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ, ನ್ಯಾಮತಿ ವಾಗೀಶ್, ಜಿ.ಪಂ. ಮಾಜಿ ಅಧ್ಯಕ್ಷ ಆರ್.ನಾಗಪ್ಪ, ಭೋವಿ ಸಮಾಜದ ಮಂಜು, ಹಿರೇಗೋಣಿಗೆರೆ ಸೋಮಣ್ಣ, ಅಲ್ತಾಫ್ ಸಾಬ್ ಮಾತನಾಡಿದರು.ಸಭೆಯಲ್ಲಿ ಕುಂಬಳೂರು ವಾಗೀಶ್, ಎಸ್.ಟಿ. ಸಮಾಜದ ಕೃಷ್ಣಪ್ಪ, ಪುರಸಭೆ ಮಾಜಿ ಅಧ್ಯಕ್ಷ, ಮೈಲಪ್ಪ, ನೊಳಂಬ ಸಮಾಜದ ಚನ್ನವೀರಪ್ಪ ಗೌಡ, ಆರುಂಡಿ ಪ್ರಕಾಶ್, ಎಚ್.ಡಿ. ವಿಜೇಂದ್ರಪ್ಪ ಎಚ್.ಬಿ.ಅಣ್ಣಪ್ಪ, ನೂರಾರು ಜನರು ಪಾಲ್ಗೊಂಡಿದ್ದರು.
- - -(ಬಾಕ್ಸ್) * ಪ್ರತಿಮೆಗಳ ಸ್ಥಾಪಿಸುವ ಉದ್ದೇಶ ರಾಜಕೀಯ ಪ್ರೇರಿತವಲ್ಲ ಮಹಾನ್ ಸಮಾಜ ಸುಧಾರಕರ ಪ್ರತಿಮೆಗಳ ಸ್ಥಾಪನೆ ಕಾರ್ಯಕ್ರಮ ರಾಜಕೀಯ ಪ್ರೇರಿತವಲ್ಲ. ಇದು ಸರ್ವಧರ್ಮಗಳ ಸಮನ್ವಯತೆ ಸಂದೇಶವನ್ನು ಸಮಾಜಕ್ಕೆ ನೀಡುವುದಾಗಿದೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಿದ ಸಂದರ್ಭ ಕೆಲವು ಸಮಾಜದ ಮುಖಂಡರು ಸಹ ನಮ್ಮ ಸಮಾಜದ ಸುಧಾರಕರ ಪ್ರತಿಮೆ ಅನಾವರಣ ಮಾಡಿಸಿ, ಅವರಿಗೂ ಗೌರವ ಸಲ್ಲಿಸೋಣ ಎಂದು ಹೇಳಿದ್ದರು. ತಾನೂ ಚಿಂತನೆ ನಡೆಸಿ, ಸಮಾಜ ಸುಧಾರಕರಿಗೆ ಗೌರವ ಕೊಡುವ ಸದುದ್ದೇಶದಿಂದ ಪ್ರತಿಮೆಗಳ ಪ್ರತಿಷ್ಠಾನೆ ಕಾರ್ಯ ಕೈಗೆತ್ತಿಕೊಂಡಿದ್ದೇವೆ ಎಂದು ನಿಗಮದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಸ್ಪಷ್ಟಪಡಿಸಿದರು.
- - --5ಎಚ್.ಎಲ್.ಐ3.ಜೆಪಿಜಿ:
ಹೊನ್ನಾಳಿ ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಸರ್ವಧರ್ಮ ಮಹಾಸಭಾ ವತಿಯಿಂದ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಎಚ್.ಬಿ. ಮಂಜಪ್ಪ ಮಾತನಾಡಿದರು.