ಹಳಿಯಾಳ: ಸ್ಥಳೀಯ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು 15 ದಿನದೊಳಗಾಗಿ ತೂಕದಯಂತ್ರ ಅಳವಡಿಸಲು ಹಾಗೂ ಕಬ್ಬು ಕಟಾವು ಮತ್ತು ಸಾಗಾಟಕ್ಕೆ ಆಕರಿಸಿದ ಹೆಚ್ಚುವರಿ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟವನ್ನು ಆರಂಭಿಸುತ್ತೇವೆ. ಇದರಿಂದ ಯಾವುದಾದರೂ ಹಾನಿ ನಷ್ಟ ಉಂಟಾದರೆ ಅದಕ್ಕೆ ಜಿಲ್ಲಾಡಳಿತವೇ ಮೂಲ ಹೊಣೆ ಎಂದು ಕಬ್ಬು ಬೆಳೆಗಾರರು ಎಚ್ಚರಿಸಿದ್ದಾರೆ.
ಭಾನುವಾರ ಪಟ್ಟಣದ ಮರಾಠ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಹಳಿಯಾಳ, ಕಲಘಟಗಿ, ಧಾರವಾಡ ಗ್ರಾಮೀಣ, ಅಳ್ನಾವರ ತಾಲೂಕಿನ ಕಬ್ಬು ಬೆಳೆಗಾರರು ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ರೈತ ವಿರೋಧಿ ಧೋರಣೆಗಳನ್ನು ಕಟುವಾಗಿ ಠೀಕಿಸಿದರು.ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಮಾತನಾಡಿ, ಉತ್ತರಕನ್ನಡ ಜಿಲ್ಲಾಧಿಕಾರಿ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆಯ ಪ್ರತಿನಿಧಿಗಳ ಸಭೆ ಕರೆದು, ತೂಕದಯಂತ್ರ ಅಳವಡಿಸಲು ಸ್ಥಳ ಪರಿಶೀಲನೆ ಮಾಡುವಂತೆ ಸೂಚಿಸಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಭೆ ನಡೆಸಿ, ಕಾರ್ಖಾನೆಯ ಹೊರಗಡೆ ಸ್ಥಳವನ್ನು ಆಯ್ಕೆ ಮಾಡಲಾಗಿತ್ತು. ಆದರೆ ಜಿಲ್ಲಾಡಳಿತಕ್ಕೆ ಕಳಿಸಿದ ವರದಿಯಲ್ಲಿ ಹೊರಗಡೆ ತೂಕದ ಯಂತ್ರ ಹಾಕಿದರೆ ವಾಹನಗಳ ಸಂಚಾರಕ್ಕೆ ತೊಂದರೆ ಎದುರಾಗಲಿದೆ ಎಂದು ದಾಂಡೇಲಿ ಡಿವೈಎಸ್ಪಿ ಆಕ್ಷೇಪ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ. ಅಂದೂ ಸಭೆಯಲ್ಲಿ ಚಕಾರವೆತ್ತದ ಡಿವೈಎಸ್ಪಿ ರೈತರಿಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.
ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ ಬೆಳಗಾಂವಕರ ಮಾತನಾಡಿ, ಕಬ್ಬು ಕಟಾವು ಮತ್ತು ಸಾಗಾಟಕ್ಕೆ ಹೆಚ್ಚಿನ ದರ ಆಕರಿಸಿದ್ದ ಬಗ್ಗೆ ನಾವು ನಡೆಸಿದ ಹೋರಾಟಕ್ಕೆ ಮಣಿದು, ರಾಜ್ಯ ಕಬ್ಬು ಆಯುಕ್ತರು ಲೆಕ್ಕಪರಿಶೋಧನೆ ಮಾಡಿದ್ದಾಗ ಪ್ರತಿ ಟನ್‌ಗೆ ₹236 ಹೆಚ್ಚುವರಿ ಆಕರಿಸಿದ್ದು ಬೆಳಕಿಗೆ ಬಂತು. ಈ ಹಣವನ್ನು ಪಾವತಿಸಬೇಕೆಂದು ಆಯುಕ್ತರು ಆದೇಶಿಸಿದರು. ಆದರೆ ಕಾರ್ಖಾನೆಯವರು ಈ ಆದೇಶಕ್ಕೆ ತಡೆಯಾಜ್ಞೆ ತಂದರು. ಈಗ ಈ ತಡೆಯಾಜ್ಞೆ ತೆರವಾಗಿ ಬಹು ತಿಂಗಳಾಗುತ್ತಾ ಬಂದರೂ ಜಿಲ್ಲಾಡಳಿತವಾಗಲಿ ಕಾರ್ಖಾನೆಯವರಾಗಲಿ ಹಣ ಪಾವತಿಸಲು ಮುಂದಾಗುತ್ತಿಲ್ಲ ಎಂದರು.ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟೆ ಮಾತನಾಡಿ, ಪ್ರಸಕ್ತ ವರ್ಷ ರಾಜ್ಯ ಕಬ್ಬು ಆಯುಕ್ತರು ಸ್ಥಳೀಯ ಕಾರ್ಖಾನೆಗೆ ಸಕ್ಕರೆ ಇಳುವರಿ ಆಧರಿಸಿ ಪ್ರತಿ ಮೆಟ್ರಿಕ್ ಟನ ಕಬ್ಬಿಗೆ ₹4000 ಎಫ್ಆರ್ಪಿ ದರ ಘೋಷಿಸಿದ್ದಾರೆ. ಆದರೆ ಈ ದರದ ಬಗ್ಗೆ ನಮಗೆ ಸಮಾಧಾನವಿಲ್ಲ. ಈ ವರ್ಷ ಗೊಬ್ಬರದ ದರವು ಹೆಚ್ಚಾಗಿದೆ. ಕಾರ್ಮಿಕರ ಕೊರತೆ ಎದುರಾಗಿದೆ. ಅದಕ್ಕಾಗಿ ಕಾರ್ಖಾನೆಯವರು ಹೆಚ್ಚಿನ ದರ ನೀಡಲು ಮುಂದಾಗಬೇಕೆಂದರು.
ಸರ್ಕಾರ ನ.1ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಲು ಸುತ್ತೋಲೆ ಹೊರಡಿಸಿದೆ. ಆದರೆ ಕಾರ್ಖಾನೆಯವರು ರೈತರಿಗೆ ಪುಸಲಾಯಿಸಿ ಎಗ್ರಿಮೆಂಟಿಗೆ ಸಹಿ ಮಾಡಿಸಿಕೊಂಡು ಬೇಗನೆ ಕಾರ್ಖಾನೆ ಆರಂಭಿಸುವ ಹುನ್ನಾರ ಆರಂಭಿಸಿದ್ದಾರೆ ಎಂದು ಆರೋಪಿಸಿದರು.ಹಳಿಯಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ ಮಾತನಾಡಿ, ಕಾಡಂಚಿನ ಹೊಲಗಳಿಗೆ ವನ್ಯಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯವರು ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದರು.
ತಾಲೂಕಿನಲ್ಲಿರುವ 68ಕ್ಕೂ ಹೆಚ್ಚು ಬಾಂದಾರುಗಳೆಲ್ಲ ನಿರುಪಯುಕ್ತವಾಗಿ ನೀರು ಸೋರಿಕೆಯಾಗುತ್ತಿದ್ದರೂ ಹಳಿಯಾಳದ ಚಿಕ್ಕ ನೀರಾವರಿ ಇಲಾಖೆಯವರು ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಪ್ರಮುಖರಾದ ಶಂಕರ ಕಾಜಗಾರ, ಎಂ.ವಿ. ಘಾಡಿ, ಸಾತೇರಿ ಗೋಡೆಮನಿ, ಪ್ರಕಾಶ ಪಾಕ್ರೆ, ಗಿರೀಶ ಠೋಸುರ, ಉಳವಪ್ಪ ಬಡಿಗೇರ, ಸುರೇಶ ಶಿವಣ್ಣನವರ, ಭರತೇಶ್ ಪಾಟೀಲ, ಪರಶುರಾಮ ಎತ್ತಿನಗುಡ, ರಾಮದಾಸ ಬೆಳಗಾಂವಕಾರ, ಅಪ್ಪಾಜಿ ಶಹಾಪುರಕರ ಇದ್ದರು.