ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಿ: ದಯಾನಂದ ಪುರಿ ಶ್ರೀ

KannadaprabhaNewsNetwork | Published : Jul 23, 2024 12:34 AM

ಸಾರಾಂಶ

ಸಮಾಜಗಳ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯವಿದೆ. ಹಾಗಾಗಿ ಸಮಾಜ ಬಾಂಧವರು ಮಕ್ಕಳಿಗೆ ಗುಣಮಟ್ಟದ ಹಾಗೂ ಉತ್ಕೃಷ್ಟ ಶಿಕ್ಷಣ ಕೊಡಿಸಬೇಕು. ಶಿಕ್ಷಣದ ಬಗೆಗೆ ಜಾಗೃತಿ ಹೊಂದಬೇಕು.

ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಉತ್ತಮ ಶಿಕ್ಷಣ ಕೊಡಿಸುವುದಕ್ಕೆ ಆದ್ಯತೆ ನೀಡಿ, ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಿ ಎಂದು ಹಂಪಿ ಗಾಯತ್ರಿ ಪೀಠಾಧಿಪತಿ ಶ್ರೀ ದಯಾನಂದಪುರಿ ಜಗದ್ಗುರು ಹೇಳಿದರು.

ಭಾಗ್ಯನಗರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಜಿಲ್ಲಾ ದೇವಾಂಗ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಭಾಗ್ಯನಗರ, ಕಿನ್ನಾಳ ದೇವಾಂಗ ಸಮಾಜದ ಸಹಯೋಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾಜಗಳ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯವಿದೆ. ಹಾಗಾಗಿ ಸಮಾಜ ಬಾಂಧವರು ಮಕ್ಕಳಿಗೆ ಗುಣಮಟ್ಟದ ಹಾಗೂ ಉತ್ಕೃಷ್ಟ ಶಿಕ್ಷಣ ಕೊಡಿಸಬೇಕು. ಶಿಕ್ಷಣದ ಬಗೆಗೆ ಜಾಗೃತಿ ಹೊಂದಬೇಕು ಎಂದು ಸಲಹೆ ನೀಡಿದರು.

ಎಸ್ಎಸ್‌ಎಲ್‌ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ನಿವೃತ್ತರಿಗೆ ಹೊಸದಾಗಿ ನೇಮಕಗೊಂಡ ನೌಕರರಿಗೆ, ದತ್ತಿ ದಾನಿಗಳಿಗೆ ಸನ್ಮಾನ ಮಾಡಲಾಯಿತು.

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಲು ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟದ ಗೌರಾವಾಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀ ನಾರಾಯಣ ಒತ್ತಾಯಿಸಿದರು.

ಸಮಾಜದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಜಿಲ್ಲೆಗೆ ಎರಡು ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ನೀಡುವ ಕೆಲಸ ಸಂಘಟನೆಗಳು ಮಾಡಬೇಕು ಎಂದು ತಿಳಿಸಿದರು.

ಸಮಾಜದ ಅಭಿವೃದ್ಧಿಗಾಗಿ ಸರ್ಕಾರದ ಸಹಾಯ ಧನ ಪಡೆದು ಉತ್ತಮ ಕಾರ್ಯ ನಿರ್ವಹಿಸುವುದಾಗಿ ಜಿಲ್ಲಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಶಂಕರ ಕರ್ಡಕಲ್ ಹೇಳಿದರು.

ಕಾರ್ಯಕ್ರಮದಲ್ಲಿ ವೇ.ಮೂ. ವಿದ್ಯಾಧರ ಸ್ವಾಮಿಗಳು, ಶಿವಶಂಕರಪ್ಪ ಚೆನ್ನಿ, ವೀರೇಶ ಅರಳಿಕಟ್ಟಿ, ಶಂಕ್ರಪ್ಪ ಬೆಟಗೇರಿ, ಪರಗಿ ನಾಗರಾಜ, ಪ್ರಹ್ಲಾದಗೌಡ ಮೆದಿಕೇರಿ, ಹನುಮಂತಗೌಡ ಗಾಳಿ, ವಾಸುದೇವ ಕೊಳಗದ ಇತರರಿದ್ದರು. ಶಿವಾನಂದ ತಿಮ್ಮಾಪುರ ನಿರೂಪಿಸಿದರು.

Share this article