ಸಂಸ್ಕೃತಿ, ಭಾಷೆ, ಸಾಧನೆ ಗುರುತಿಸುವ ಬದಲು ತಿರುಚುವ ಕೆಲಸವಾಗುತ್ತಿದೆ

KannadaprabhaNewsNetwork |  
Published : Mar 16, 2026, 12:45 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಪ್ರೊ.ಎಸ್.ಜಿ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದರು

ಕನ್ನಡಪ್ರಭ ವಾರ್ತೆ ಹಿರಿಯೂರು

ಇತ್ತೀಚಿನ ದಿನಗಳಲ್ಲಿ ಜನಸಮುದಾಯದ ಸಂಸ್ಕೃತಿ, ಭಾಷೆ, ಸಾಧನೆ ಗುರುತಿಸುವ ಬದಲಾಗಿ ಅವುಗಳನ್ನು ತಿರುಚುವ ಕೆಲಸವಾಗುತ್ತಿದೆ ಎಂದು ನಾಡಿನ ಹಿರಿಯ ಸಾಹಿತಿ ಪ್ರೊ ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ನೆಹರೂ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರಿನ ಅರಸರು ಕನ್ನಂಬಾಡಿ ಅಣೆಕಟ್ಟು ಕಟ್ಟಿಸಿದರು. ಆದರೆ ಅವರ ಹೆಸರು ಪ್ರಚಲಿತವಾಗಲಿಲ್ಲ. ಸರ್ ಎಂ.ವಿಶ್ವೇಶ್ವರಯ್ಯನವರ ಹೆಸರು ಪ್ರಚಾರವಾಯಿತು. ಇದು ಇತಿಹಾಸವನ್ನು ತಿರುಚುವ ಕೆಲಸ. ಸಾಹಿತ್ಯ ಪರಿಷತ್ತು ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಸಂಸ್ಥೆಯಾಗಿದೆ. ಎಚ್.ವಿ.ನಂಜುಂಡಯ್ಯನವರ ಶ್ರಮದಿಂದ ಸಾಹಿತ್ಯ ಪರಿಷತ್ತು ಆರಂಭವಾಯಿತು. ಈ ನೆಲದ ಜಲಸಂಪತ್ತು ಪರಂಪರೆಯನ್ನು ಕಾಪಾಡುವ ಜವಾಬ್ದಾರಿ ಹೊಣೆಗಾರಿಕೆ ಸಾಹಿತ್ಯ ಪರಿಷತ್ತಿಗೆ ಇದೆ. ಆದರೆ ಇಂತಹ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ವಿಶ್ವ ಇಂದು ಧಗಧಗ ಉರಿಯುತ್ತಿದೆ. ಅಪಾರ ಸಾವು ನೋವು ಸಂಕಟಗಳು ಎದುರಾಗುತ್ತಿವೆ. ವರ್ತಕ ಮನಸ್ಥಿತಿಯ ರಾಜಕಾರಣಿಗಳಿಂದ ಮನುಷ್ಯತ್ವ, ನೈತಿಕ ಮೌಲ್ಯಗಳನ್ನು ಕಾಣಲು ಸಾಧ್ಯವಿಲ್ಲ. ಆದುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದರು.

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟಗಳು ಆರಂಭವಾಗಿ ಇಂದಿಗೆ 35 ವರ್ಷಗಳು ಕಳೆದಿವೆ. ಆದರೆ ಈ ಕೆಲಸಗಳು ಇನ್ನೂ ಮುಗಿದಿಲ್ಲ. ಇದಕ್ಕೆ ಆಳುವಂತಹ ಸರ್ಕಾರಗಳ ಇಚ್ಚಾ ಶಕ್ತಿಯ ಕೊರತೆ ಕಾರಣವಾಗಿದೆ. ಕನ್ನಡ ಭಾಷೆ, ನೆಲಜಲ ಹೋರಾಟವೆಂದರೆ ಜನರು ಬರುವುದಿಲ್ಲ. ಚಲನಚಿತ್ರ, ಧಾರಾವಾಹಿ ನಟ-ನಟಿಯರು ಬರುತ್ತಾರೆ ಎಂದರೆ ಜನರು ಸೇರುತ್ತಾರೆ. ಜನರಲ್ಲಿ ಇನ್ನೂ ಪ್ರಜ್ಞಾವಂತಿಕೆಯ ಕೊರತೆ ಕಾಣುತ್ತಿದೆ. ಸಾಹಿತ್ಯ, ಸಂಗೀತ, ನಾಟಕ ಎಂದರೆ ಜನರು ದೂರ ಸರಿಯುತ್ತಿದ್ದಾರೆ. ಜನರಿಗೆ ಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ,ಶಾಲೆ ಮತ್ತು ಕಾಲೇಜುಗಳಲ್ಲಿ ಆಯೋಜಿಸಬೇಕು ಎಂದರು.

ಚಿತ್ರದುರ್ಗ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಅನ್ಯ ಭಾಷಿಕರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಸಂಸ್ಕಾರ ಸಂಸ್ಕೃತಿ ಹೊಂದಿರುವ ವಿಶ್ವದ ಏಕೈಕ ಭಾಷೆ ಕನ್ನಡ. ಈ ಭಾಷೆಯಿಂದ ಮಾತ್ರ ನಮ್ಮ ಸಂಕಟ, ವೇದನೆ,ದುಃಖ, ದುಮ್ಮಾನಗಳನ್ನು ಹೇಳಿಕೊಳ್ಳಲು ಸಾಧ್ಯ. ಆದ್ದರಿಂದ ತಾಯಿ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಲು ಇಂತಹ ಸಾಹಿತ್ಯ ಸಮ್ಮೇಳನಗಳು ಅಗತ್ಯವಾಗಿವೆ ಎಂದರು.

ಕಸಬಾ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಡಿ.ಚಿತ್ತಣ್ಣ ಸೀಗೆಹಟ್ಟಿ ಮಾತನಾಡಿ, ಕನ್ನಡ ಭಾಷೆ ವಿಶ್ವದಲ್ಲಿ ಅತಿ ಸುಂದರವಾದ ಭಾಷೆಯಾಗಿದ್ದು ಇದನ್ನು ಕಲಿಯೋದು ತುಂಬಾ ಸರಳವಾಗಿದೆ. ಇಂತಹ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಕವಿ ಪಂಪನಿಂದ ಇಂದಿನ ಹಂಪನಾವರೆಗೆ ಸಾವಿರಾರು ಕವಿಗಳು ಸಾವಿರಾರು ಕೃತಿಗಳನ್ನು ನಾಡಿಗೆ ನೀಡಿದ್ದಾರೆ. ಅವರ ಹೆಜ್ಜೆ ಗುರುತುಗಳನ್ನು ಸ್ಮರಿಸುವ ಕೆಲಸಗಳು ಆಗಬೇಕಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಹಿರಿಯೂರಿನ ರೈತರ ಬದುಕಿನ ಅಸ್ಮಿತೆ ಸಾರುವ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭ ಮಾಡಬೇಕು. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಮತ್ತು ಆರ್ಥಿಕ ಭದ್ರತೆ ದೊರೆಯುತ್ತದೆ. ಹಿರಿಯೂರು ಪಟ್ಟಣ ಬೆಳೆದಿದ್ದು ಉನ್ನತ ಶಿಕ್ಷಣ ಪಡೆಯಲು ಮೆಡಿಕಲ್ ಕಾಲೇಜು ಹಾಗೂ ಎಂಜಿನಿಯರಿಂಗ್ ಕಾಲೇಜುಗಳನ್ನು ಆರಂಭ ಮಾಡಬೇಕು. ಹಿರಿಯೂರಿನಲ್ಲಿ ಸಾಂಸ್ಕೃತಿಕ ಚಟುವಟಿಕೆ ಸಾಹಿತ್ಯ ಸಂಗೀತ ರಂಗ ಕಲೆಗೆ ಸಂಬಂಧಿಸಿದ ಕಾರ್ಯಕ್ರಮ ಮಾಡಲು ಕನ್ನಡ ಭವನ ನಿರ್ಮಾಣ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಚಂದ್ರಯ್ಯ ಬೆಳವಾಡಿ, ಕರ್ನಾಟಕ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಜೆ.ರಾಜು ಬೇತೂರು ಪಾಳ್ಯ, ನಗರಸಭೆ ಮಾಜಿ ಸದಸ್ಯ ಎಂ.ಡಿ.ಸಣ್ಣಪ್ಪ, ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಎಚ್.ತಿಪ್ಪೇಸ್ವಾಮಿ, ಚಿತ್ರ ನಟರಾದ ರಾಜೇಶ್ ನಟರಂಗ, ರಣವ್, ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪೊಲೀಸ್ ಪೇಟೆ ಪ್ರಸನ್ನ, ಕಾರ್ಯದರ್ಶಿ ಅಜ್ಗರ್ ಅಹ್ಮದ್, ಎಸ್.ಜಿ. ರಂಗಸ್ವಾಮಿ ಸಕ್ಕರ, ರೈತ ಮುಖಂಡರಾದ ಕೆ.ಸಿ. ಹೊರಕೇರಪ್ಪ, ಕಸವನಹಳ್ಳಿ ರಮೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್. ಹನುಮಂತರಾಯಪ್ಪ, ಟಿ.ಕೃಷ್ಣಮೂರ್ತಿ, ಪಿ.ಆರ್.ದಾಸ್,

ಜಿ.ಎಲ್.ಮೂರ್ತಿ, ಕಲ್ಲಟ್ಟಿ ಹರೀಶ್, ಡಾ.ನವೀನ್ ಮಸ್ಕಲ್, ರಂಗಯ್ಯ, ಇಜಿಎಸ್ ಗೋವಿಂದಪ್ಪ, ಪದ್ಮನಾಭ್, ನಂದವಾರಿಕ್, ಅಶೋಕ್, ಗಡಾರಿ ಕೃಷ್ಣಪ್ಪ, ರವೀಂದ್ರನಾಥ್ ಮುಂತಾದವರು ಉಪಸ್ಥಿತರಿದ್ದರು.ಇದೇ ವೇಳೆ ಅನಿತಾ ಕೆ.ಗೋವಿಂದ ಅವರ ಹೆಣ್ಣು ಆಬಲೆ ಅಲ್ಲ, ಪ್ರವೀಣ್ ಬೆಳಗೆರೆಯವರ ಮರ ಮಾತನಾಡಿದಾಗ ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು.

ನಂತರ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ 24ಕ್ಕೆ ಪ್ರತಿಭಟನೆ
ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ 105 ವರ್ಷಗಳ ಇತಿಹಾಸ ಹೊಂದಿದೆ:ಎಚ್.ಡಿ.ಕುಮಾರಸ್ವಾಮಿ