ಬರಕ್ಕೆ ಸ್ಪಂದಿಸುವ ಬದಲು ಶ್ರೀ ರಾಮನ ಹೆಸರಿನಲ್ಲಿ ಕಾಲಹರಣ: ಸಚಿವ ಆರ್‌.ಬಿ.ತಿಮ್ಮಾಪುರ

KannadaprabhaNewsNetwork | Published : Jan 16, 2024 1:46 AM

ಸಾರಾಂಶ

ಮುಧೋಳ: ಬರಗಾಲದಿಂದ ತತ್ತರಿಸಿದ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಬಿಡಿಗಾಸು ನೀಡಿಲ್ಲ. ಜನರ ಸಂಕಷ್ಟಕ್ಕೆ ಸಹಾಯ ಮಾಡಬೇಕಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀ ರಾಮನ ಹೆಸರಿನಲ್ಲಿ ಜಪ-ತಪದಲ್ಲಿ ಕಾಲಹರಣ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು. ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಕಾಲಕ್ಕೆ ಮಳೆ ಆಗದೆ ಬರಗಾಲಕ್ಕೆ ತುತ್ತಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಬೇಕಾದವರು ಶ್ರೀ ರಾಮನ ಜಪದಲ್ಲಿ ಮಗ್ನರಾಗಿದ್ದಾರೆ ಮತ್ತು ಯುವಕರ ಬುದ್ಧಿವಂತಿಕೆ ಶಕ್ತಿ ಮೇಲೆ ಉದ್ಯೋಗ ನೀಡಬೇಕಾದ ಸರ್ಕಾರ ಇಂದು ರಾಜಕೀಯವಾಗಿ ಶ್ರೀ ರಾಮನ ಜಪ ತಪದಲ್ಲಿದ್ದಾರೆ ಎಂದು ಟೀಕಿಸಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ಬರಗಾಲದಿಂದ ತತ್ತರಿಸಿದ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಬಿಡಿಗಾಸು ನೀಡಿಲ್ಲ. ಜನರ ಸಂಕಷ್ಟಕ್ಕೆ ಸಹಾಯ ಮಾಡಬೇಕಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶ್ರೀ ರಾಮನ ಹೆಸರಿನಲ್ಲಿ ಜಪ-ತಪದಲ್ಲಿ ಕಾಲಹರಣ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಕಿಡಿಕಾರಿದರು.

ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಕಾಲಕ್ಕೆ ಮಳೆ ಆಗದೆ ಬರಗಾಲಕ್ಕೆ ತುತ್ತಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಬೇಕಾದವರು ಶ್ರೀ ರಾಮನ ಜಪದಲ್ಲಿ ಮಗ್ನರಾಗಿದ್ದಾರೆ ಮತ್ತು ಯುವಕರ ಬುದ್ಧಿವಂತಿಕೆ ಶಕ್ತಿ ಮೇಲೆ ಉದ್ಯೋಗ ನೀಡಬೇಕಾದ ಸರ್ಕಾರ ಇಂದು ರಾಜಕೀಯವಾಗಿ ಶ್ರೀ ರಾಮನ ಜಪ ತಪದಲ್ಲಿದ್ದಾರೆ ಎಂದು ಟೀಕಿಸಿದ ಸಚಿವ ತಿಮ್ಮಾಪುರ, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲಿಯೇ ರೈತರಿಗೆ ₹ 2000 ಬೆಳೆ ಪರಿಹಾರ ರೈತರಿಗೆ ಖಾತೆ ಜಮಾ ಮಾಡಲಿದೆ ಎಂದು ಹೇಳಿದರು.

ಈಗಾಗಲೇ 1.50 ಲಕ್ಷ ಮನೆಗಳು ನೊಂದಣಿಯಾಗಿವೆ, ಇನ್ನೂ 1.60 ಲಕ್ಷ ಮನೆಗಳು ನೋಂದಣಿ ಆಗಬೇಕಾಗಿದೆ. ಯುವನಿಧಿಗಾಗಿ ಈಗಾಗಲೇ 43 ಸಾವಿರ ಪದವಿಧರರು ನೋಂದಣಿ ಮಾಡಿಸಿದ್ದಾರೆ, ಇನ್ನೂ ನೋಂದಣಿ ಮಾಡುಬೇಕಿದೆ. ಮಾಸಾಂತ್ಯದೊಳಗೆ ನೋಂದಣಿ ಮಾಡಿದ ಪದವಿಧರರ ಖಾತೆಗೆ ಹಣ ಜಮಾ ಆಗಲಿದೆ ಎಂದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಜಾತಿ ಜನಾಂಗ ನೋಡದೆ ಸರ್ವರಿಗೂ ಗ್ಯಾರಂಟಿ ಯೋಜನೆ ತಲುಪಿಸುತ್ತಿದೆ. ಬರಗಾಲವಿದ್ದರೂ ಸಹ ಜನರು ಬೇರೆ ರಾಜ್ಯಕ್ಕೆ ಗುಳೆ ಹೋಗುವುದನ್ನು ತಪ್ಪಿಸಲು ಗ್ಯಾರಂಟಿಗಳೇ ಮುಖ್ಯ ಕಾರಣವಾಗಿವೆ ಎಂದರು.

ಜ.16ರಂದು ಮುಧೋಳ ನಗರದಲ್ಲಿ ವಿವಿಧ 33 ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಅಭಿವೃದ್ಧಿಪರ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ಹಣದ ತೊಂದರೆ ಇಲ್ಲ ಎಂದು ಸಮರ್ಥಿಸಿಕೊಂಡ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಶೀಘ್ರದಲ್ಲೇ ನೂರಾರು ಕಾರ್ಯಕರ್ತರನ್ನು ವಿವಿಧ ಇಲಾಖೆಗಳಿಗೆ ನಾಮ ನಿರ್ದೇಶನ ಮಾಡುವ ಮೂಲಕ ಕಾರ್ಯಕರ್ತರಿಗೆ ಅಧಿಕಾರದ ನೀಡುತ್ತೇವೆ ಎಂದರು.

ಇದೇ ವೇಳೆ ರಾಣಾ ಪ್ರತಾಪ್ ಸಿಂಹ ಮೂರ್ತಿಯನ್ನು ಜ.28 ರಂದು ಲೋಕಾರ್ಪಣೆಯ ಮಾಡುವುದಾಗಿ ತಿಳಿಸಿ ಪ್ರಚಾರ ಸಾಮಾಗ್ರಿ ಬಿಡುಗಡೆಗೊಳಿಸಿದರು.

ಜಿ.ಪಂ ಸಹಾಯಕ ನಿರ್ದೇಶಕ ಭೀಮಪ್ಪ ತಳವಾರ, ತಾ.ಪಂ ಇಒ ಸಂಜಯ ಹಿಪ್ಪರಗಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ಸಿಪಿಐ ಮಹಾದೇವ ಶಿರಹಟ್ಟಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this article