ಕನ್ನಡಪ್ರಭ ವಾರ್ತೆ ಹಾಸನ
2025-26ನೇ ಸಾಲಿನ ರಾಜ್ಯದ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಗ್ಯಾರಂಟಿಗಳನ್ನು ಗಮನದಲ್ಲಿಟ್ಟುಕೊಂಡರೇ ವಿನಃ ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನವನ್ನೇ ನೀಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಏಕೆಂದರೆ ಜಿಲ್ಲೆಯ ಜನರ ನಿರೀಕ್ಷೆಯಲ್ಲಿ ಒಂದೆರಡಕ್ಕೆ ಆದ್ಯತೆ ಸಿಕ್ಕಿರುವುದು ಬಿಟ್ಟರೆ ಉಳಿದ್ಯಾವುದು ಕೂಡ ಸರ್ಕಾರದ ಗಮನಕ್ಕೇ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.ಸದ್ಯಕ್ಕೆ ಜಿಲ್ಲೆಯಲ್ಲಿರುವ ಬಹುದೊಡ್ಡ ಸಮಸ್ಯೆ ಎಂದರೆ ಅದುವೇ ಕಾಡಾನೆ ಹಾವಳಿ. ಆಲೂರು, ಬೇಲೂರು ತಾಲೂಕಿನಲ್ಲಿ ಪ್ರತಿನಿತ್ಯ ಆನೆಗಳು ಸದ್ದು ಮಾಡುತ್ತಲೇ ಇವೆ. ಅರೇಹಳ್ಳಿ, ಬಿಕ್ಕೋಡು ಭಾಗದಲ್ಲಿ ಮನೆಯಿಂದ ಹೊರ ಹೋದವರು ಮತ್ತೆ ಬರುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ ಎನ್ನುವ ಸ್ಥಿತಿ ಇದೆ. ಈವರೆಗೆ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ಹಾಗಾಗಿ ಇಲ್ಲಿನ ಜನರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಎನ್ನುವ ಪ್ರಮುಖ ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಸಮಸ್ಯೆ ಬಗೆಹರಿಸುವ ಬದಲಾಗಿ ಸಮಸ್ಯೆಯಿಂದ ಪ್ರಾಣ ಕಳೆದುಕೊಂಡವರಿಗೆ ನೀಡುವ ಪರಿಹಾರದ ಮೊತ್ತವನ್ನು 15 ಲಕ್ಷ ರು.ಗಳಿಂದ 20 ಲಕ್ಷ ರು.ಗಳಿಗೆ ಏರಿಸಿದೆ. ಅಲ್ಲಿಗೆ ಸಮಸ್ಯೆ ಬಗೆಹರಿಸಲಾಗದು. ಸಮಸ್ಯೆಯಿಂದ ಪ್ರಾಣ ಕಳೆದುಕೊಂಡವರ ಪ್ರಾಣಕ್ಕೆ ಹೆಚ್ಚಿನ ಬೆಲೆ ಕಟ್ಟಿದೆ. ಹೆಚ್ಚಿನ ಪರಿಹಾರ ಸಿಗುತ್ತದೆ ಎಂದು ಯಾರೂ ಕೂಡ ಪ್ರಾಣ ಕಳೆದುಕೊಳ್ಳಲು ಸಿದ್ಧರಿಲ್ಲ ಎನ್ನುವುದು ಸರ್ಕಾರದ ಗಮನದಲ್ಲಿರಬೇಕಿತ್ತು.
ಈ ನಿಟ್ಟಿನಲ್ಲಿ ಭದ್ರಾ ಅಭಯಾರಣ್ಯದಲ್ಲಿ ಕಾಡಾನೆಗಳ ಧಾಮ ನಿರ್ಮಿಸಲು ಆರಂಭಿಕವಾಗಿ 20 ಕೋಟಿ ರು.ಗಳ ಘೋಷಣೆ ಆಗಿದೆ. ಸರ್ಕಾರದ ಈ ಸ್ಥಿತಿಯಲ್ಲಿ ಸೂಕ್ತ ಪ್ರಮಾಣದಲ್ಲಿ ಹಣ ಬಿಡುಗಡೆ ಆದರೆ ಆನೆಧಾಮ ಆಗುತ್ತದೆ. ಧಾಮ ಆದ ನಂತರ ಜಿಲ್ಲೆಯಲ್ಲಿ ಕಾಟ ಕೊಡುತ್ತಿರುವ ಆನೆಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಯಬೇಕು. ನಂತರ ಅವುಗಳನ್ನೆಲ್ಲಾ ಧಾಮಕ್ಕೆ ಸಾಗಿಸಬೇಕು. ಅಲ್ಲಿಯವರೆಗೆ ಜಿಲ್ಲೆಯ ಮಲೆನಾಡು ಭಾಗದ ಜನರ ಸ್ಥಿತಿ ಏನು ಎನ್ನುವ ಪ್ರಶ್ನೆ ಎದುರಾಗಿದೆ.ಇನ್ನು ಮಳೆಗಾಲದಲ್ಲಿ ರಾಜ್ಯದ ಹಲವೆಡೆ ರಸ್ತೆ ಮೇಲೆ ಉಂಟಾಗುವ ಭೂ ಕುಸಿತ ತಡೆಗಟ್ಟಲಿಕ್ಕಾಗಿ ಯೋಜನೆ ಘೋಷಣೆ ಮಾಡಲಾಗಿದೆ. ಅದರಲ್ಲಿ ಜಿಲ್ಲೆಯ ಶಿರಾಡಿ ಘಾಟಿಗೂ ಒಂದಷ್ಟು ಅನುದಾನ ಸಿಗಲಿದೆ.ಬೂವನಹಳ್ಳಿ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗೂ ಮುಂದುವರೆದ ಭಾಗದ ಅನುದಾನ ನೀಡುವುದಾಗಿ ಹೇಳಲಾಗಿದೆ. ಎತ್ತಿನಹೊಳೆ ಯೋಜನೆಗೆ 553 ಕೋಟಿ ಬಿಡುಗಡೆ ಮಾಡಲಾಗಿದೆ.
ಹಾಗೆಯೇ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಆದರೆ, ಈವರೆಗೂ ಯಾವುದೇ ಬಜೆಟ್‌ನಲ್ಲಿ ಅದರ ಪ್ರಸ್ತಾಪವೇ ಇಲ್ಲವಾಗಿದೆ. ಏತ ನೀರಾವರಿ ಯೋಜನೆಗಳ ಬಗ್ಗೆಯೂ ಪ್ರಸ್ತಾಪವಿಲ್ಲ. ಸಾಲದ್ದಕ್ಕೆ ಕಳೆದ ವರ್ಷ ಸಿದ್ದರಾಮಯ್ಯ ಅವರೇ ಘೋಷಿಸಿದಂತೆ ಅಂಬೇಡ್ಕರ್ ಸ್ಮಾರಕ ನಿರ್ಮಿಸುವ ಬಗ್ಗೆ ಯಾವುದೇ ಚಕಾರವೂ ಇಲ್ಲ. ಹಾಗಾಗಿ ಕಳೆದ ಬಜೆಟ್‌ನ ಘೋಷಣೆಗಳೇ ಇನ್ನೂ ಘೋಷಣೆಯಾಗಿಯೇ ಉಳಿದಿರುವಾಗ ಈ ವರ್ಷದ ಬಜೆಟ್‌ನಲ್ಲಿ ಆಗಿರುವ ಘೋಷಣೆಗಳು ಘೋಷಣೆಯಾಗಿಯೇ ಉಳಿಯಲಿವೆಯೇ ಎನ್ನುವ ಅನುಮಾನ ಜಿಲ್ಲೆಯ ಜನರನ್ನು ಕಾಡುತ್ತಿದೆ.ಹಾಸನ ನಗರದ ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರದ ಪಾಲಿನ ಅನುದಾನ ನೀಡುವ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಘೋಷಣೆ ಇಲ್ಲ. ಕೇಂದ್ರ ಸರ್ಕಾರದ ಅನುದಾನದಲ್ಲಿ ಒಂದು ಭಾಗದ ಮೇಲ್ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಉಳಿದ ಒಂದು ಬದಿ ರಸ್ತೆ ಅರ್ಧಂಬರ್ಧ ಕಾಮಗಾರಿಯಾಗಿ ನಿಂತಿದೆ. ರಾಜ್ಯ ಸರ್ಕಾರದ ಈ ನೀತಿ ರೈಲ್ವೆ ಇಲಾಖೆಗೆ ತಾಂತ್ರಿಕ ಸಮಸ್ಯೆ ತಂದಿಟ್ಟಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿಲ್ಲ.