ಕನ್ನಡಪ್ರಭ ವಾರ್ತೆ ಶಿವಮೊಗ್ಗಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ (ಆರ್‌ಪಿಸಿ) ಹುದ್ದೆಗಳ ನೇಮಕಾತಿಗಾಗಿ ಶಿವಮೊಗ್ಗ ನಗರದಲ್ಲಿ ಸೆ.14 ಮತ್ತು 15 ರಂದು ನಡೆಯಲಿರುವ ಪರೀಕ್ಷೆಗೆ ಅಗತ್ಯವಾದ ಸಕಲ ಸಿದ್ಧತೆ ಕೈಗೊಳ್ಳುವಂತೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಪ್ರದೀಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆಪಿಎಸ್‌ಸಿ ಕಾರ್ಯದರ್ಶಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಬಳಿಕ ಅಧಿಕಾರಿಗಳೊಂದಿಗೆ ಪರೀಕ್ಷೆ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ನಗರದ ಒಟ್ಟು 28 ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿಗೆ ಕನ್ನಡ ಭಾಷಾ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಸೆ.14ರಂದು ಮಧ್ಯಾಹ್ನ 2 ರಿಂದ ಸಂಜೆ 4ರವರೆಗೆ ಕನ್ನಡ ಭಾಷಾ ಪರೀಕ್ಷೆ, ಸೆ.15 ರಂದು ಬೆಳಗ್ಗೆ 10ರಿಂದ 11.30 ರವರೆಗೆ ಕನ್ನಡ ಭಾಷಾ ಪರೀಕ್ಷೆ ಪತ್ರಿಕೆ-1, ಸಾಮಾನ್ಯ ಪತ್ರಿಕೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆ ಯವರೆಗೆ ಪತ್ರಿಕೆ-2, ಸಾಮಾನ್ಯ ಪತ್ರಿಕೆ ಪರೀಕ್ಷೆ ನಡಯಲಿದೆ. ಸೆ.14ರಂದು 7066 ಅಭ್ಯರ್ಥಿಗಳು, ಸೆ.15ರಂದು ಬೆಳಗಿನ ಪರೀಕ್ಷೆಯಲ್ಲಿ 8993 ಮತ್ತು ಮಧ್ಯಾಹ್ನದ ಪರೀಕ್ಷೆಯಲ್ಲಿ 8354 ಅಭ್ಯರ್ಥಿಗಳು ಹಾಗೂ 12 ವಿಶೇಷಚೇತನರು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಅಗತ್ಯವಾದ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈಗಗಲೇ ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ನಿರೀಕ್ಷಣಾಧಿಕಾರಿಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಕೊಠಡಿ ಪರಿವೀಕ್ಷಕರು ಸೇರಿದಂತೆ ಅಗತ್ಯ ವಾದ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಿ, ಅನುಸರಿಸಬೇಕಾದ ಪರೀಕ್ಷಾ ಸೂಚನೆಗಳ ಕುರಿತು ತರಬೇತಿ ನೀಡಲಾಗಿದೆ ಎಂದು ಹೇಳಿದರು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ನಿಗದಿತ ವೇಳೆಯೊಳಗೆ ಅಭ್ಯರ್ಥಿಗಳ ತಪಾಸಣೆಗೆ ಕ್ರಮ ಕೈಗೊಳ್ಳಬೇಕು. ಆಸನಗಳ ವ್ಯವಸ್ಥೆ ಕುರಿತು ಅಭ್ಯರ್ಥಿಗಳಿಗೆ ತಿಳಿಸಬೇಕು. ಹಾಗೂ ಎಲ್ಲ ಕೇಂದ್ರಗಳಲ್ಲಿ ಜ್ಯಾಮರ್ ಮತ್ತು ಸಿಸಿ ಕ್ಯಾಮೆರಾ ಅಳವಡಿಸಲಾಗುವುದು.