ಶಿರೂರು ಗುಡ್ಡ ಕುಸಿತದ ಮಣ್ಣು ಶೀಘ್ರ ತೆರವಿಗೆ ಡಿಸಿ ಸೂಚನೆ

KannadaprabhaNewsNetwork | Published : Apr 30, 2025 12:37 AM

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ಶೇಖರಗೊಂಡಿರುವ ಮಣ್ಣು ತೆರವು ಕಾರ್ಯವನ್ನು ಕೂಡಲೇ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಂದರು ಇಲಾಖೆಯ ಆಧಿಕಾರಿಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ವಿಶೇಷ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ಶೇಖರಗೊಂಡಿರುವ ಮಣ್ಣು ತೆರವು ಕಾರ್ಯವನ್ನು ಕೂಡಲೇ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಂದರು ಇಲಾಖೆಯ ಆಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಶೇಷ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ, ಗಂಗಾವಳಿ ನದಿಯಲ್ಲಿ ಶೇಖರಗೊಂಡಿರುವ ಮಣ್ಣು ತೆರವುಗೊಳಿಸುವ ಕಾರ್ಯವನ್ನು ನಿರ್ವಹಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಪ್ಪಿಕೊಂಡಿದ್ದು, ಅದರಂತೆ ಒಂದು ವಾರದ ಒಳಗೆ ಎಲ್ಲ ಅಗತ್ಯ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಸೇರಿದಂತೆ ಎಲ್ಲ ಅನುಮತಿಗಳನ್ನು ಪಡೆದು ತಕ್ಷಣ ಮಣ್ಣು ತೆರವು ಕಾರ್ಯ ಆರಂಭಿಸಿ, ನಿಗದಿತ ಅವಧಿಯೊಳಗೆ ಮಣ್ಣು ತೆರವು ಕಾರ್ಯಾಚರಣೆ ಸಂಪೂರ್ಣವಾಗಿ ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದರು.

ಮಣ್ಣು ತೆರವು ಕಾರ್ಯಚರಣೆಗೆ ಆಗಮಿಸುವ ಬಾರ್ಜ್ ಸಂಚಾರಕ್ಕೆ ನದಿಯಲ್ಲಿ ಯಾವುದೇ ಅಡಚಣೆ ಇಲ್ಲವಾಗಿದ್ದು, ನದಿಯಿಂದ ತೆರವುಗೊಳಿಸುವ ಮಣ್ಣನ್ನು ನಿಯಮಾವಳಿಗಳಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮತ್ತು ತೆರವು ಕಾರ್ಯಚರಣೆಗೆ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುವಂತೆ ಬಂದರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಆನಂದ್‌ಸಾ ಹಬೀಬ್, ಬಂದರು ಇಲಾಖೆಯ ನಿರ್ದೇಶಕ ಕ್ಯಾ. ಸ್ವಾಮಿ ಮತ್ತಿತರ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಶಿರೂರಿನಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿದು ಸಾವು-ನೋವು ಸಂಭವಿಸಿತ್ತು. ಜತೆಗೆ ಅಪಾರ ಪ್ರಮಾಣದ ಮಣ್ಣು ಗಂಗಾವಳಿ ನದಿಯಲ್ಲಿ ಸಂಗ್ರಹವಾಗಿತ್ತು. ನದಿ ಮಧ್ಯದಲ್ಲಿ ಗುಡ್ಡ ನಿರ್ಮಾಣವಾದಂತೆ ಭಾಸವಾಗುತ್ತಿತ್ತು.

Share this article