ರಾಮನಗರ: ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗಗಳನ್ನು ಒದಗಿಸಲು ಜಿಲ್ಲಾ ಪಂಚಾಯತ್ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ 2025-26ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಲಿದೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಸೂಚಿಸಿದರು.
ಜಿಲ್ಲೆಯ ಯುವಜನತೆಯ ದತ್ತಾಂಶಗಳನ್ನು ಸಂಗ್ರಹಿಸಿ ಅವರ ಸಾಮರ್ಥ್ಯಗಳನ್ನು ಪ್ರಸ್ತುತ ಲಭ್ಯವಿರುವ ಉದ್ಯೋಗಾವಕಾಶಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಉದ್ಯೋಗ ಕಲ್ಪಿಸುವುದು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು, ವಿಕಲಚೇತನರು, ಲೈಂಗಿಕ ಅಲ್ಪಸಂಖ್ಯಾತರು, ವಿಶೇಷ ವರ್ಗದ ಜನತೆಗೆ ಉದ್ಯೋಗಗಳನ್ನು ಒದಗಿಸುವುದು ಈ ಉದ್ಯೋಗ ಮೇಳದ ಉದ್ದೇಶ ಎಂದು ತಿಳಿಸಿದರು.
ಉದ್ಯೋಗ ಮೇಳದ ಕುರಿತು ಕರಪತ್ರಗಳನ್ನು ಹಂಚುವುದು, ಧ್ವನಿವರ್ಧಕ ಬಳಕೆ ಹಾಗೂ ಗೋಡೆ ಬರಹ ಸೇರಿದಂತೆ ವಿವಿಧ ಮಾದ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡುವಂತೆ ಮುಖ್ಯವಾಗಿ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ ಕೈಗೊಳ್ಳಬೇಕು ಎಂದು ಅನ್ಮೋಲ್ ಜೈನ್ ಹೇಳಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಶಿವಕುಮಾರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
2ಕೆಆರ್ ಎಂಎನ್ 8.ಜೆಪಿಜಿರಾಮನಗರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳೆ ಸಂಬಂಧ ನಡೆದ ಪೂರ್ವಭಾವಿ ಸಭೆಯನ್ನು ಸಿಇಒ ಅನ್ಮೋಲ್ ಜೈನ್ ಉದ್ಘಾಟಿಸಿದರು.